ಬೀದರ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶನಿವಾರದ ಸಮಯ ಬದಲಾವಣೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಪದಾಧಿಕಾರಿಗಳು ಮಂಗಳವಾರ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದ ಶನಿವಾರ ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 12ರವರೆಗೆ ತರಗತಿ ನಡೆಸಲಾಗುತ್ತಿದೆ. ಆದರೆ, ಈ ಅವಧಿ ಅನುಕೂಲಕರವಾಗಿರದ ಕಾರಣ ಅರ್ಧಕ್ಕೂ ಹೆಚ್ಚು ಮಕ್ಕಳು ವಿಳಂಬ ಇಲ್ಲವೇ ಗೈರು ಹಾಜರಾಗುತ್ತಿದ್ದಾರೆʼ ಎಂದು ತಿಳಿಸಿದರು.
ʼಶಿಕ್ಷಕರು ಸಕಾಲಕ್ಕೆ ಹಾಜರಾಗುತ್ತಿದ್ದರೂ, ಶಾಲೆ ಅವಧಿ ಬೇಗ ಇರುವುದರಿಂದ ವಾಹನ ಸೌಕರ್ಯ ಹಾಗೂ ಇತರ ಕಾರಣಗಳಿಂದ ಬಹಳಷ್ಟು ಮಕ್ಕಳಿಗೆ ಶಾಲೆಗೆ ಬರಲು ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆʼ ಎಂದು ಹೇಳಿದರು.
ಈ ಹಿಂದಿನಂತೆ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ತರಗತಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಶಾಲೆ ಉಳಿವಿಗಾಗಿ ದುಂಡು ಮೇಜಿನ ಸಭೆ : ಚಳವಳಿಗೆ ಸಿದ್ಧತೆ
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸೂರ್ಯಕಾಂತ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಶಕೀಲ್ ಜಾಫ್ರಿ, ಅಧ್ಯಕ್ಷ ವೈಜಿನಾಥ ಸಾಳೆ, ಪ್ರಧಾನ ಕಾರ್ಯದರ್ಶಿ ಬಲವಂತರಾವ್ ರಾಠೋಡ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಸಾಗರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಬಾಪುರೆ, ಪ್ರಮುಖರಾದ ಎಂ.ಡಿ. ಶಾಬುದ್ದೀನ್, ಶಾಮಸುಂದರ ಖಾನಾಪುರೆ, ಸಂಜೀವ್ ರಾಜನಾಳೆ, ಜೈಸಿಂಗ್ ಠಾಕೂರ್ ಇದ್ದರು.