ಮಾನವ ಕಳ್ಳ ಸಾಗಾಣಿಕೆ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಚಟುವಟಿಕೆಯಾಗಿದ್ದು, ಇದು ಸಮಾಜಕ್ಕೆ ಮಾರಕವಾಗಿದೆ ಎಂದು ಬೀದರ್ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಸಂವಿಧಾನದ 21ನೇ ವಿಧಿಯು ಭಾರತದ ಪ್ರತಿಯೊಬ್ಬ ಪ್ರಜೆಗಳಿಗೆ ಸ್ವತಂತ್ರವಾಗಿ ಜೀವಿಸುವ ಹಕ್ಕು ನೀಡಿದೆ. 23ನೇ ವಿಧಿಯು ಮಾನವ ಕಳ್ಳ ಸಾಗಾಣಿಕೆ ಅಪರಾಧ ಎಂದು ತಿಳಿಸುತ್ತದೆ. ಭಾರತ ಸರ್ಕಾರವು ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ 1956ರಲ್ಲಿ ಜಾರಿಗೊಳಿಸಿದೆ. ಆದರೂ ಕೂಡ ಮಾನವ ಕಳ್ಳ ಸಾಗಾಣಿಕೆ ಆಗುತ್ತಿರುವುದು ಗಂಭೀರದ ವಿಷಯವಾಗಿದೆʼ ಎಂದರು.
ʼಕಾಣೆಯಾದವರ ಬಗ್ಗೆ ದೂರು ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿ ಇರುತ್ತದೆ. ಅಲ್ಲಿ ಕೂಡ ದೂರು ನೀಡಬಹುದು. ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸದಾ ಸಾರ್ವಜನಿಕರ ಸಹಾಯಕ್ಕೆ ಇರುತ್ತದೆ. ಮಾನವ ಕಳ್ಳ ಸಾಗಾಣಿಕೆಯನ್ನು ತಡೆದು ಮಾನವ ಕಳ್ಳ ಸಾಗಾಣಿಕೆ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಸಹಕರಿಸಬೇಕುʼ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ʼಮಾನವ ಕಳ್ಳ ಸಾಗಾಣಿಕೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಇತರರು ಒಳಗೊಡಿರುತ್ತಾರೆ. ಮಹಿಳೆಯರನ್ನು ಬೇರೆ ಸ್ಥಳಗಳಿಗೆ ಸಾಗಾಣಿಕೆ ಮಾಡಿ ವೇಶ್ಯಾವಾಟಿಕೆ ಸೇರಿದಂತೆ ಸಮಾಜದ ಕೆಟ್ಟ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಕ್ಕಳನ್ನು ಭಿಕ್ಷಾಟನೆಯಲ್ಲಿ ಬಳಸಿಕೊಳ್ಳುವುದು ಹಾಗೂ ದೇಹ ಅಂಗಾಂಗ ತೆಗೆದು ಮಾರಾಟ ಮಾಡುವುದು, ಕಾರ್ಖಾನೆಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಇಂತಹ ಹೀನ ಕೃತ್ಯಗಳಿಂದ ಜನರನ್ನು ಕಾಪಾಡಬೇಕುʼ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಅರ್ಜುನ್ ಬನಸೋಡೆ ಮಾತನಾಡಿ, ʼಮಾನವ ಕಳ್ಳ ಸಾಗಾಣಿಕೆಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚು ಸಾಗಾಣಿಕೆ ಮಾಡುತ್ತಾರೆ ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಲ್ಲಿ ಮತ್ತು ಮಕ್ಕಳನ್ನು ಭಿಕ್ಷಾಟನೆ, ಬಾಲ ಕಾರ್ಮಿಕ ಅಂತಹ ಕೃತ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ಕೃತ್ಯಗಳಿಂದ ಮಕ್ಕಳು, ಮಹಿಳೆಯರನ್ನು ರಕ್ಷಿಸಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕುʼ ಎಂದು ತಿಳಿಸಿದರು.
ʼಕೆಲವು ಸಂದರ್ಭಗಳಲ್ಲಿ ಕಾಣೆಯಾದರು ಕೂಡ ಪೋಷಕರು ಒಂದು ವಾರದ ನಂತರ ಬರಬಹುದು, ಒಂದು ತಿಂಗಳ ನಂತರ ಬರಬಹುದು ಅಥವಾ ಒಂದು ವರ್ಷದ ಬಳಿಕ ಮರಳಿ ಬರಬಹುದು ಎಂದು ನಿರ್ಲಕ್ಷಿಸುತ್ತಾರೆ. ಇದು ಪೋಷಕರು ಮಾಡುವ ಅತಿ ದೊಡ್ಡ ತಪ್ಪಾಗಿದೆ. ಕಾಣೆಯಾದ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ದೂರ ದಾಖಲಿಸಬೇಕುʼ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ನ್ಯಾಯಾವಾದಿ ಬಸವರಾಜ ಬುಳ್ಳಾ ಮತ್ತು ಬಿ.ಎಸ್.ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿದರು.
ಇದನ್ನೂ ಓದಿ : ಬೀದರ್ | ಕಂದಕಕ್ಕೆ ಉರುಳಿದ ಸಾರಿಗೆ ಬಸ್ : ಪ್ರಯಾಣಿಕರು ಅಪಾಯದಿಂದ ಪಾರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಧರ್ ಎಮ್.ಎಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ್ ಕುಳಲಿ, ಡಾನ್ ಬಾಸ್ಕೋ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಸ್ಟೀವನ್ ಲಾರೆನ್ಸ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಮಕ್ಕಳ ಸಂರಕ್ಷಣಾಧಿಕಾರಿ ಗೌರಿಶಂಕರ ಪ್ರತಾಪುರ ನಿರೂಪಿಸಿ, ವಂದಿಸಿದರು.