ಬೀದರ್‌ | ಬಿಟ್ಟೂಬಿಡದ ಮಳೆ : 325 ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿ; ಪರಿಹಾರದ ನಿರೀಕ್ಷೆಯಲ್ಲಿ ರೈತರು

Date:

Advertisements

ಜಿಲ್ಲೆಯಲ್ಲಿ ಕೆಲವು ವಾರಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಕಳೆದ ಒಂದು ವಾರದಿಂದ ಮುಂಜಾನೆ ಬಿಸಿಲಿನಿಂದ ಶುರುವಾಗುವ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಧಗೆ ಏರತೊಡಗುತ್ತದೆ. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮಳೆಯಾಗುತ್ತಿದೆ. ಒಮ್ಮೊಮ್ಮೆ ಮಧ್ಯಾಹ್ನದ ವೇಳೆಯಲ್ಲೇ ಬಿರುಗಾಳಿ, ಗುಡುಗು, ಮಿಂಚು ಸಹಿತ ಜೋರು ಮಳೆಯಾಗುತ್ತಿದೆ.

ಬೇಸಿಗೆಯ ಧಗೆ ಮರೆಸಿದ ಅಕಾಲಿಕ ಮಳೆಗೆ ಬೇಸತ್ತ ಜನ ʼಈ ಮಳಿ ಏನ್ ಮಳಗಾಲ್ದಾಗ್ ಮಾಡಿನಂಗೇ ಸಾಕ್‌ ಮಾಡ್ಯಾದ್‌ʼ ಎಂದು ಆಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಕೆಲವೆಡೆ ಸಾಲ ಮಾಡಿ ಮಾವು, ಪಪ್ಪಾಯ, ಬಾಳೆ, ಕಲ್ಲಂಗಡಿ, ಮಾವು, ಈರುಳ್ಳಿ ಸೇರಿದಂತೆ ಇತರೆ ತರಕಾರಿ ಬೆಳೆಗಳ ಮೇಲೆ ಹಾಕಿದ ಬಂಡವಾಳ ಅಕಾಲಿಕ ಮಳೆಯಿಂದ ಬಹುಪಾಲು ಹಾನಿಯಾಗಿದೆ.

Advertisements

ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಜಿಲ್ಲಾದ್ಯಂತ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕೈಗೊಂಡಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ 325ಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

WhatsApp Image 2025 05 21 at 2.39.35 PM 1
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್‌, ಬಸವಕಲ್ಯಾಣ, ಔರಾದ್‌, ಹುಲಸೂರ, ಭಾಲ್ಕಿ ಹಾಗೂ ಬೀದರ್‌ ತಾಲ್ಲೂಕಿನಲ್ಲಿ ಬೆಳೆದ ಮಾವು 122.25 ಹೆಕ್ಟೇರ್, ಪಪ್ಪಾಯ 87.3, ಟೊಮೆಟೊ 43.3, ಕಲ್ಲಂಗಡಿ 29.97, ಈರುಳ್ಳಿ 18, ತರಕಾರಿ 13.8 ಸೇರಿದಂತೆ ಒಟ್ಟು 325 ಹೆಕ್ಟೇರ್‌ ತೋಟಗಾರಿಕೆ ಬೆಳೆ ನೆಲಕಚ್ಚಿದ್ದು, ಆದಾಯ ನಿರೀಕ್ಷೆಯಲ್ಲಿದ್ದ‌ ಸುಮಾರು 350 ಬೆಳೆಗಾರರಿಗೆ ಅಕಾಲಿಕ ಮಳೆ ಸಂಕಷ್ಟಕ್ಕೆ ದೂಡಿದೆ.

ಬೆಳೆ ಹಾನಿ ಕುರಿತು ತೋಟಗಾರಿಕೆಯ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾನಿಗೀಡಾದ ಜಮೀನುಗಳಿಗೆ ತೆರಳಿ, ಜಿಯೊ ಟ್ಯಾಗ್ ಸಹಿತ ರೈತರ ಫೋಟೊಗಳನ್ನು ತೆಗೆದುಕೊಂಡು ಹಾನಿಯ ಅಂದಾಜು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ವಿಜಯಕುಮಾರ್ ಜಿ. ಹೇಳುತ್ತಾರೆ.

ಆಲಿಕಲ್ಲು ಮಳೆಗೆ ಬೆಳೆ ಬರ್ಬಾದ್‌ :

ʼಐದು ಎಕರೆ ಭೂಮಿಯಲ್ಲಿ ಪಪ್ಪಾಯ ಬೆಳೆದಿದ್ದೆ, ಎರಡು ವಾರದ ಹಿಂದೆ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಪಪ್ಪಾಯ ಸಂಪೂರ್ಣ ಹಾಳಾಗಿದೆ. ʼಏನ್‌ ಮಾಡ್ಬೇಕ್‌, ನಮ್‌ ರೈತರ ಹಣೆಬರಹನೇ ಇಷ್ಟು, ಲಾಕೋ ರೂಪಾಯಿ ಹಾಕಿ ಪಪ್ಪಾಯ ಛಂದ್‌ ಬೆಳೆಸಿದಾ, ಕೈಗೆ ಬಂದ್‌ ಯಾಳಿಗಿ ಮಳಿ, ಗಾರ್‌ ಬಿದ್ದಿ ಎಲ್ಲ ಬರ್ಬಾದ್‌ ಆಗಿ, ಪಪ್ಪಾಯ ಗಿಡಗೆಳೆಲ್ಲ ಒಣಗಿನ ಕಡ್ಡಿ ಹಾಂಗ್‌ ಆಗ್ಯಾವ್. ಹಿಂಗಾಗಿ ನಾಲ್ಕೈದ್‌ ಲಾಕ್‌ ರೂಪಾಯಿ ಹಾಳಾಗ್ಯಾದ್.‌ ಅಧಿಕಾರಿಗಳು ಹೊಲುಕ್ ಬಂದಿ ಸರ್ವೇ ಏನೋ ಮಾಡ್ಕೊಂಡ್‌ ಹೋಗ್ಯಾರ್‌, ಖರೇ ನಾವ್‌ ಕಳ್ಕೊಂಡಿನ್‌ ಅರ್ಧನೂ‌ ರೊಕ್ಕನೂ ಸರ್ಕಾರ ಕೊಡಲ್ಲ, ಇದರಿಂದ ಭಾಳ್‌ ಪರೇಶ್ಯಾನ್‌ ಆಗಿದ್ದೇವ್‌ʼ ಎಂದು ಖಟಕ್‌ ಚಿಂಚೋಳಿ ಗ್ರಾಮದ ರೈತ ಮಲ್ಲಿಕಾರ್ಜುನ್‌ ಅವರು ತಮ್ಮ ನೋವು ತೋಡಿಕೊಂಡರು.

ʼಹೋದ್‌ ವರ್ಷ್‌ ಇಷ್ಟ್‌ ಮಳಿ ಇದ್ದಿಲ್ಲ, ಹಿಂಗ್‌ ಯಾವುದೂ ಬೆಳಿಗಿ ಹಾನಿ ಆಗಿದಿಲ್ಲ ನೋಡಿ. ಹಿಂಗಾಗಿ ಹೋದವರ್ಷ್‌ ಏನಾರಾ ಪಂದ್ರಾ ಲಾಕ್‌ ಪಪ್ಪಾಯ ಬೆಳಿ ಕೈಯಿಗಿ ಬಂದಿತ್ತು. ಈ ವರ್ಷ ನಮ್‌ ಮೈನಾತಿ ಎಲ್ಲಾನೂ ಈ ಅವಖಳಿ ಮಳಿ ಖರಾಬ್‌ ಮಾಡ್ತುʼ ಅಂತ ರೈತ ಮಲ್ಲಿಕಾರ್ಜುನ್‌ ಅವರು ತಮ್ಮ ಸಂಕಟ ʼಈದಿನ.ಕಾಮ್‌ʼ ಜೊತೆಗೆ ಹಂಚಿಕೊಂಡರು.

ʼಒಂದೂವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದೇನೆ. ಕಟಾವಿನ ಬಳಿಕ ಹೊಲದಲ್ಲಿ ಸಂಗ್ರಹಿಸಿಟ್ಟ ಸುಮಾರು 150 ಕ್ವಿಂಟಲ್‌ನಷ್ಟು ಈರುಳ್ಳಿ ಅಕಾಲಿಕ ಮಳೆಯಿಂದಾಗಿ ಬಹುಪಾಲು ಬೆಳೆ ಹಾನಿಯಾಗಿದೆ. ಲಕ್ಷಾಂತರ ಮೌಲ್ಯದ ಹಾನಿಯಾದ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕುʼ ಎಂದು ಭಾಲ್ಕಿ ತಾಲೂಕಿನ ರೈತ ಶಿವಕುಮಾರ್‌ ಆಗ್ರಹಿಸುತ್ತಾರೆ.

WhatsApp Image 2025 05 21 at 3.28.37 PM
ಅಕಾಲಿಕ ಮಳೆಯಿಂದಾಗಿ ವರವಟ್ಟಿ(ಕೆ) ಗ್ರಾಮದ ರೈತ ವೀರೇಶ ರೆಡ್ಡಿ ಅವರು ಬೆಳೆದ ಕಲ್ಲಂಗಡಿ ಬೆಳೆ ನೀರು ಸಂಗ್ರಹದಿಂದ ಹಾನಿಯಾಗಿದೆ.

ʼಈ ವರ್ಷವೇ ಹೊಸದಾಗಿ ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಕಲ್ಲಂಗಡಿ ಬೆಳೆ ಜಲಾವೃತವಾಗಿದೆ. ಕಟಾವಿಗೆ ಮುನ್ನವೇ ಬೆಳೆ ನೀರಲ್ಲಿ ಮುಳುಗಿದೆ. ಇದರಿಂದ ಕನಿಷ್ಠ 5 ಲಕ್ಷ ರೂಪಾಯಿ ಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಕುರಿತು ಇನ್ನೂ ಸಮೀಕ್ಷೆ ನಡೆಸಿಲ್ಲʼ ಎಂದು ಹುಮನಾಬಾದ್‌ ತಾಲ್ಲೂಕಿನ ವರವಟ್ಟಿ(ಕೆ) ಗ್ರಾಮದ ಯುವ ರೈತ ವೀರೇಶ ರೆಡ್ಡಿ ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್ | ಸಾರಿಗೆ ಬಸ್ ಪಲ್ಟಿ : ಇಬ್ಬರಿಗೆ ಗಾಯ; ತಪ್ಪಿದ ಭಾರಿ ಅನಾಹುತ

ಮುಂದುವರೆದ ಮಳೆ ಅಬ್ಬರದಿಂದ ಅನೇಕ ಕಡೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. ಕೆಲವೆಡೆ ಬೆಳೆ ಹಾನಿಯಾದರೂ ಜಂಟಿ ಸಮೀಕ್ಷೆ ಕಾರ್ಯ ಇನ್ನೂ ಕೈಗೊಂಡಿಲ್ಲ. ಶೀಘ್ರದಲ್ಲೇ ಸಮೀಕ್ಷೆ ಕಾರ್ಯ ಮುಗಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X