ಪಡಿತರ ಮಾರಾಟದಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ದರ ವಿಧಿಸುವುದು, ಇಲ್ಲವೇ ಬಯೋಮೆಟ್ರಿಕ್ ಪಡೆಯಲು ಹಣ ಪಡೆದರೆ ಪಡಿತರ ಅಂಗಡಿಗಳ ಮಾನ್ಯತೆಯನ್ನು ರದ್ದುಪಡಿಸುವ ಸಾಧ್ಯತೆ ಇದೆ.
ಪಡಿತರ ಮಾರಾಟದಲ್ಲಿ ಅಕ್ರಮ ಕಂಡುಬಂದಿರುವ ಕುರಿತು ಬೀದರ್ ಜಿಲ್ಲಾಡಳಿತ ಪಡಿತರ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಮಾನ್ಯತೆ ರದ್ದು ಮಾಡಿದೆ. ಅಕ್ರಮದಲ್ಲಿ ನಿರತರಾದವರ ಮೇಲೆ ಚಾಟಿ ಬೀಸಿದ್ದು, ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದೆ.
“ಸರ್ಕಾರದ ನಿಯಮ ಉಲ್ಲಂಘಿಸಿದ ಜಿಲ್ಲೆಯ 22 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿ ಅವುಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
“ಬೀದರ್ ನಗರದ 11 ನ್ಯಾಯಬೆಲೆ ಅಂಗಡಿ, ಬೀದರ್ ಗ್ರಾಮೀಣ ಭಾಗದ 4, ಹುಮನಾಬಾದ್ ತಾಲೂಕಿನ 4, ಭಾಲ್ಕಿ ತಾಲೂಕಿನ 2 ಅಂಗಡಿಗಳು ಸೇರಿದಂತೆ ಒಟ್ಟು 22 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿ ಅವುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ಪಡಿತರ ಚೀಟಿದಾರರಿಗೆ ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಅಕ್ಕಿ ವಿತರಣೆ ಮಾಡಿರುವುದು, ಪಡಿತರ ಚೀಟಿದಾರರಿಂದ ಬಯೋಮೆಟ್ರಿಕ್ ಪಡೆಯಲು ತಲಾ 10 ರೂ. ಪಡೆದಿರುವುದು ಮತ್ತು ಬಿಲ್ ಪುಸ್ತಕ, ಮಾರಾಟ ಪುಸ್ತಕ, ದಾಸ್ತಾನು ಫಲಕ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕೈಗೊಳ್ಳಲಾಗಿದೆ” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
“ಅಕ್ರಮ ಎಸಗಿರುವ 22 ನ್ಯಾಯ ಬೆಲೆ ಅಂಗಡಿಗಳಿಂದ 53.54 ಲಕ್ಷ ರೂ.ಮೌಲ್ಯದ 1793.46 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿದ್ದು, 32 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜಿಲ್ಲೆಯ 6 ಕಡೆ ದಾಳಿ ನಡೆಸಿ ಅನಧಿಕೃತವಾಗಿ ಸಂಗ್ರಹಿಸಿದ್ದ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿದ್ದ 228 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ ಅದಾಲತ್‌ಗೆ ಗ್ರಾಹಕರ ಆಗ್ರಹ
“ಬೀದರ್ ಜಿಲ್ಲೆಯ ಹಲವು ಭಾಗದಲ್ಲಿ ಪಡಿತರದಾರರೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಅಕ್ರಮದಲ್ಲಿ ಭಾಗಿಯಾಗಿರುವ ದೂರುಗಳು ಕೇಳಿ ಬರುತ್ತಲೇ ಇವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರಿಗೆ ದೂರು ನೀಡಿದರೆ ಅವರು ಎಚ್ಚರಿಕೆ ನೀಡುತ್ತಿದ್ದರು. ಈಗ ಬಿಗಿ ಕ್ರಮ ಕೈಗೊಂಡಿರುವುದು ಸೂಕ್ತವಾಗಿದೆ” ಎಂದು ಜಿಲ್ಲೆಯ ಹಲವು ಪಡಿತರಚೀಟಿ ಹೊಂದಿರುವ ಗ್ರಾಹಕರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಡಿವೈಎಫ್ಐ ಒತ್ತಾಯ
“ಆಹಾರ ಇಲಾಖೆ ಅವ್ಯವಸ್ಥೆ, ಪಡಿತರ ಮೋಸ, ಜನರಿಗೆ ಆಗುತ್ತಿರುವ ಅಡಚಣೆ ತಪ್ಪಿಸಲು ಹೀಗೆ ನಿಯಮಿತವಾಗಿ ಕ್ರಮ ಆಗಬೇಕು. ಈ ಮೊದಲು ಇದ್ದ ಹಾಗೆ ತಿಂಗಳಿಗೆ ಒಂದು ಬಾರಿಯಾದರೂ ʼಆಹಾರ ಅದಾಲತ್ʼ ಆಯೋಜಿಸಬೇಕು” ಎಂದು ಗ್ರಾಹಕರು ಆಗ್ರಹಿಸಿದ್ದಾರೆ.