ʼಅಬ್ಬಾ! ಈವೊರ್ಷ್ ಭಾಳ್ ಚಳಿ ಅವಾರೀ, ನಡು ಮಧ್ಯಾಣ್ಯಾಳಿ ಕಡಕ್ ಬಿಸುಲ್ ಇದ್ದೂರ್ಬೀ ಮೈದಾಗಿಂದ ಥಂಡಿ ಒಟ್ಟಾ ಹೋಗಾಲೋಗ್ಯಾದ್, ಸಂಕ್ರಾಂತ್ರಿ ಯಾಳಿ ಆಗೋ ಚಳಿ ಈಗೇ ಆಗ್ಲತಾವ್ʼ ಅಂತ ರಾತ್ರಿ 10 ಆದ್ರೂ ರೋಡಿನ್ ಮ್ಯಾಲೆ ಉರಿ ಹಚ್ಚಿಂದ್ ನೋಡಿ ಕಾಸ್ಕೋಂಬರಿ ಅಂತಿ ಘೋಂಗ್ಡಿ ಹಚ್ಕೊಂಡ್ ಬಂದಾ ಬಸಪ್ಪಾ ತಾಬೀ ಮೈಮುದುಡಿಸಿ ಬೆಂಕಿ ಮುಂದು ಕುಂತಾ…..
“ಹಾ..ನೋಡ್ರೀ..ಈವೊರ್ಷ್ ಮಳೀನೂ ಭಾಳ್ ಬಿದ್ದಿಂದ ಸಲೇಕೆ ಏನೋ, ಚಳಿ ತೋಲ್ ಆಗ್ಲಾತಾವ್, ಇಂಥದ್ರಾಗ್ ಮುಂಜಾನತ್ ಜಲ್ದಿ ಏಳ್ಬೇಕೇ ಅನ್ಸಲ್ ಹೋಗ್ಯಾದ್, ಹೊತ್ತ್ಮುಣಿಗಿ ಪಾಚ್ ಆಯ್ತು ಅಂದುರ್ ಸಾಕ್ ಮೈದಾಗ್ ನಡುಗ್ ಹುಕ್ಲಾತುದ್, ಅದ್ಕೆ ಹಿನಾ ಥೋಡೆ ಹೊತ್ತ್ ಇರ್ಲಾಕ್ಕಾಗೇ ಹೊಲ್ದಿಂದ್ ಮನೀಗಿ ಹೊಂಟಿದಾ…ಅನ್ಕೋತಾ ಬೆಂಕಿ ಮುಂದ್ ಕುಂತಿನ್ ನಾಕೈದ್ ಮಂದಿ ಹಂಗೇ ಮೈ ಕಾಸ್ಕೊತಾ ಕುಂತೂರ್…
ಹೌದು, ಅರೆಮಲೆನಾಡಿನಂತೆ ಇರುವ ಗಡಿ ಜಿಲ್ಲೆ ಬೀದರ್‌ನಲ್ಲಿ ಈ ಬಾರಿ ಚಳಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇದೆ. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಒಂದು ವಾರದಿಂದ ಉಷ್ಣಾಂಶ ಇಳಿಯುತ್ತಲೇ ಬರುತ್ತಿದ್ದು, ಇದರಿಂದ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ. ಭಾರಿ ಪ್ರಮಾಣದ ಮೈನಡುಗುವ ಥಂಡಿಗೆ ಜಿಲ್ಲೆಯ ಜನ ಥಂಡಾ ಹೊಡಯುವಂತಾಗಿದೆ.
ಹಗಲೆಲ್ಲಾ ಬಿಸಿಲಿನ ವಾತಾವರಣ ಕಂಡುಬಂದರೂ ಥಂಡಿ ಗಾಳಿ ಮೈಕೊರೆಯುತ್ತಲೇ ಇರುತ್ತದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹವಾಮಾನ ಕನಿಷ್ಠ ತಾಪಮಾನ 13 ಡಿಗ್ರಿ ಆಸುಪಾಸಿನಲ್ಲಿದೆ. ಇದರಿಂದ ಚಳಿಯ ಪ್ರಮಾಣ ಹೆಚ್ಚಾಗಿದೆ. ಕಳೆದ ಡಿ.16ರಂದು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ 7.5 ಕನಿಷ್ಠ ತಾಪಮಾನ ದಾಖಲಾಗಿತ್ತು. ಮುಂದಿನ ಮೂರ್ನಾಲ್ಕು ದಿನಗಳವರೆಗೆ ತಾಪಮಾನ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗ್ರಾಮೀಣ ಭಾಗದಲ್ಲಿ ವಯಸ್ಕರು ವೃದ್ಧರು ಚಳಿಯಿಂದ ದೇಹ ಕಾಯಿಸಿಕೊಳ್ಳಲು ಚಹಾದಂಗಡಿಗಳ ಎದುರು, ರಸ್ತೆ ಬದಿಗಳಲ್ಲಿ ಬೆಂಕಿ ಹಚ್ಚಿ ಅದರ ಶಾಖಕ್ಕೆ ಮೈಯೊಡ್ಡುತ್ತಿದ್ದಾರೆ. ಬೆಳಿಗ್ಗೆ, ಸಂಜೆ ವಾಯುವಿಹಾರಕ್ಕೆ ಹೋಗುವವರು ಚಳಿಗೆ ಹೆದರಿ ಮನೆಯಿಂದ ಹೊರಬರಲು ಯೋಚಿಸುತ್ತಿದ್ದಾರೆ. ಹಗಲಿನಲ್ಲಿ ಸೂರ್ಯನ ಶಾಖ ಹಿತವನಿಸುತ್ತಿದ್ದು, ಬಹುತೇಕ ಜನರು ಸೂರ್ಯನ ಬರವಿಕೆಗೆ ಕಾಯುವಂತಾಗಿದೆ. ತಡವಾದರೆ ʼಭಾಳ್ ಚಳಿ ಆಯ್ತಾವ್ʼ ಎಂದು ಕೆಲಸಕ್ಕೆ ತೆರಳಿದ್ದ ಮಂದಿ ಸಂಜೆ 6ರ ಒಳಗೆ ಮನೆ ಸೇರಿಕೊಳ್ಳುತ್ತಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮವೇ ಚಳಿ ಹೆಚ್ಚಾಗಲು ಕಾರಣವಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಅಧಿಕ ಪ್ರಮಾಣ ಮಳೆಯಾದ ಕಾರಣವೂ ಇದೆ. ಹಾಗಂತ ಈ ಚಳಿಯಿಂದ ಯಾವುದೇ ಪರಿಣಾಮ ಬೀರದು ಎಂದು ಹವಾಮಾನ ಇಲಾಖೆಯ ತಾಂತ್ರಿಕ ಅಧಿಕಾರಿ ಬಸವರಾಜ್ ಬಿರಾದಾರ್ ಈದಿನ.ಕಾಮ್ ಗೆ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗುವುದು ಹೊಸದೇನಲ್ಲ. 2015 ರ ಜನವರಿ 10ರಂದು 5.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 2023ರ ಜನವರಿ 9ರಂದು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ 5.5 ಡಿಗ್ರಿ ಸೆಲ್ಸಿಯಸ್ ಕನಿಷ್ಢ ತಾಪಮಾನ ದಾಖಲಾಗಿತ್ತು. ಆದರೆ ಪ್ರಸಕ್ತ ವರ್ಷ ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿರುವುದು. ಕನಿಷ್ಠ ತಾಪಮಾನ ಮುಂದಿನ ಜನವರಿಯಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಡಿ.18ರಂದು ಜಿಲ್ಲೆಯನ್ನು ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ಮೂರ್ನಾಲ್ಕು ದಿನಗಳವರೆಗೆ ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತಗಾಳಿ ಬೀಸುವ ಸಾಧ್ಯತೆ ಇದೆ. ಸಾರ್ವಜನಿಕರು ಮುನ್ನೆಚರಿಕೆ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಎನ್‌ಎಸ್‌ಯುಐ
ʼಸಾರ್ವಜನಿಕರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ, ಸೂರ್ಯಾಸ್ತದ ನಂತರ ವಾಕಿಂಗ್ ಬರುವವರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮಗಳಲ್ಲಿ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಗಡೆ ಬರಬಾರದು. ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬರದಿರಲು ತಿಳಿಸಿದೆ. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ಟೇಟರ್, ಜಾಕೇಟ್, ಉಲನ್ ಟೋಪಿ ಕಾಲುಕುಬಸ್, ಕೈಗ್ಲೌಸ್ ಗಳನ್ನು ಧರಿಸಲು ಸೂಚಿಸಿದೆ. ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡದಿರಲು ಜಿಲ್ಲಾಡಳಿತ ತಿಳಿಸಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.