ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಜೊತೆಗೆ ನಾಗರಿಕತೆ ಮತ್ತು ಸಂಸ್ಕಾರ ಕಲಿಸುವುದು ತುಂಬಾ ಅಗತ್ಯವಾಗಿದೆ ಎಂದು ಜ್ಞಾನ ದಾಸೋಹ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ಬಾಬಣೆ ಹೇಳಿದರು.
ಔರಾದ್ ತಾಲ್ಲೂಕಿನ ಧರಿಹನುಮಾನ ದೇವಸ್ಥಾನ ಸಮೀಪದ ಜ್ಞಾನ ಭಾರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ ಮಾತೆಯರಿಂದ ಮಕ್ಕಳಿಗೆ ಕೈತುತ್ತು ಉಣಿಸುವ ಕಾರ್ಯಕ್ರಮ, ವಿಜ್ಞಾನ ಮೇಳ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ʼಇತ್ತೀಚೆಗೆ ಮೊಬೈಲ್ ಎಂಬ ಮಾಯ ಕನ್ನಡಿ ಬಂದ ಬಳಿಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಲಿಯುವ ಆಸಕ್ತಿ ಕಡಿಮೆ ಆಗುತ್ತಿದೆ. ಶಿಕ್ಷಣ ಎಷ್ಟೇ ಕಲಿತರೂ ಉತ್ತಮ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ ವ್ಯರ್ಥ. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕಾಗಿದೆʼ ಎಂದು ಸಲಹೆ ನೀಡಿದರು.
ತಾಯಂದಿರ ಕೈತುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಸುರೇಂದ್ರ ಅವರು ಮಾತನಾಡಿ, ʼಬಾಲ್ಯದಲ್ಲಿ ತಾಯಿ ನೀಡುವ ಕೈತುತ್ತು ಕೇವಲ ಆಹಾರವಲ್ಲ. ಅದರಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಅಂತಃಕರಣ, ಆನಂದ ಹಾಗೂ ಸದ್ಭಾವನೆ ಇರುತ್ತದೆ. ಅಮ್ಮನ ಕೈತುತ್ತು ಅಮೃತಕ್ಕೆ ಸಮವಾಗಿದೆ. ಅಮ್ಮನ ಉಪಕಾರ ತೀರಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ನೈತಿಕ ಮೌಲ್ಯಗಳು ಅಳವಡಿಸಿಕೊಳ್ಳಬೇಕಾದರೆ ಪೋಷಕರ ಕಾಳಜಿ, ಜವಾಬ್ದಾರಿ ಮುಖ್ಯವಾಗಿದೆʼ ಎಂದರು.

ವಿಜ್ಞಾನ ಮೇಳ ಉದ್ಘಾಟಿಸಿ ಶಿಕ್ಷಕ ದೇವಿಪ್ರಸಾದ ಕಲಾಲ್ ಮಾತನಾಡಿ, ʼವಿಜ್ಞಾನ ಮೇಳವು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪೂರಕವಾಗಿದೆ. ಶಾಲೆಗಳಲ್ಲಿ ವಿಜ್ಞಾನ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯು ಮಕ್ಕಳಲ್ಲಿ ಲೋಕದ ಹೊಸತನ ಪರಿಚಯಿಸುವ ಕಾರ್ಯವಾಗಿದೆʼ ಎಂದರು.
ಶಿಕ್ಷಕ ಮಹಮ್ಮದ್ ರಫಿ ಮಾತನಾಡಿ, ʼಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯʼ ಎಂದರು,
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನೂತನ ಕ್ರೀಡಾಂಗಣ ಹಾಗೂ ಆಠೋಪಕರಣ ಮೈದಾನವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮ ಅಂಗವಾಗಿ ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ವಿವಿಧ ಕ್ರೀಡೆ ಏರ್ಪಡಿಸಲಾಯಿತು. ಮಧ್ಯಾಹ್ನ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸುದ್ದಿ ಓದಿದ್ದೀರಾ? ಔರಾದ್ | ಬೀದಿ ನಾಯಿ ದಾಳಿಗೆ ಜಿಂಕೆ ಸಾವು
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಬಾಲಾಜಿ ಕುಂಬಾರ್, ಮಲ್ಲಪ್ಪಗೌಡ್, ಸಂಸ್ಥೆಯ ಕಾರ್ಯದರ್ಶಿ ಗುರುನಾಥ ದೇಶಮುಖ, ಖಾಸಗಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಬಸವರಾಜ ಶೆಟಕಾರ್, ಸಂಜುಕುಮಾರ್ ಶೆಟಕಾರ್, ಜೈವಂತ ಉಜನಿ, ಲಕ್ಷ್ಮಿಕಾಂತ್ ಅಚಿಗಾಂವೆ, ಪ್ರಭುಸ್ವಾಮಿ, ಸಂಜು ಕಂಠಾಳೆ, ಭೀಮಾಶಂಕರ ಜೀರ್ಗೆ, ಸೂರ್ಯಕಾಂತ, ಸುಧಾಕರ್ ಬಿರಾದಾರ, ಸಂಜು ಬಿರಾದಾರ, ಅನೀಲಕುಮಾರ ಸಿಂಧೆ, ಶಾಲೆಯ ಮುಖ್ಯಶಿಕ್ಷಕರಾದ ಮಧುಕರ ಭಂಗಾರೆ, ಚಿರಂಜೀವಿ ಪಾಟೀಲ್ ಸೇರಿದಂತೆ ಶಾಲಾ ಸಿಬ್ಬಂದಿ, ಪೋಷಕರು ಹಾಜರಿದ್ದರು. ಶಿಕ್ಷಕ ಶಿವಾನಂದ ಕೋಟೆ ನಿರೂಪಿಸಿದರು. ವಿದ್ಯಾರ್ಥಿನಿ ದಿವ್ಯಾ ಮಲ್ಲಪ್ಪಗೌಡ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪುಷ್ಪಲತಾ ಶ್ರೀಕಾಂತ ವಂದಿಸಿದರು.