ಬೀದರ್ ಜಿಲ್ಲೆಯ ಪ್ರಜಾವಾಣಿಯ ಹಿರಿಯ ವರದಿಗಾರ ಶಶಿಕಾಂತ ಶೆಂಬೆಳ್ಳಿ ಅವರು ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿ ಆಯ್ಕೆ ಮಾಡಿದೆ.
ಮಹಾಶೈವ ಧರ್ಮಪೀಠವು ಪ್ರತಿವರ್ಷ ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಅವರ ಗುರು ಧಾರವಾಡದ ತಪೋವನದ ಮಹಾತಪಸ್ವಿ ಕುಮಾರಸ್ವಾಮಿ ಅವರ ಜನ್ಮದಿನೋತ್ಸವದ ನೂಲಹುಣ್ಣಿಮೆಯ ದಿನದಂದು ಮಹಾಶೈವ ಗುರುಪೂರ್ಣಿಮೆ ಆಚರಣೆ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಮನಾರ್ಹ ಸೇವೆಗೈದ ಮಹನೀಯರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮೂಲತಃ ಬೀದರ್ ಜಿಲ್ಲೆಯವರಾದ ಶಶಿಕಾಂತ ಶೆಂಬೆಳ್ಳಿ ಅವರು ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಬೆಂಗಳೂರು ಮುಖ್ಯ ಕಚೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಜನಪರ ಕಾಳಜಿಯೊಂದಿಗೆ ವಸ್ತುನಿಷ್ಠ ವರದಿಗಳ ಮುಖಾಂತರ ಪತ್ರಿಕಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.
ಪ್ರಶಸ್ತಿಯು ₹51 ಸಾವಿರ ರೂಪಾಯಿ ನಗದು ಬಹುಮಾನ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಅಗಸ್ಟ್ 9ರಂದು ಮಹಾಶೈವ ಧರ್ಮಪೀಠದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಭಾಭವನದಲ್ಲಿ ನಡೆಯುವ ‘ಮಹಾಶೈವ ಗುರುಪೂರ್ಣಿಮೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಭೆಯಲ್ಲಿ ಮಹಾಶೈವ ಧರ್ಮಪೀಠ ಆಡಳಿತಾಧಿಕಾರಿ ತ್ರಯಂಬಕೇಶ, ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಬಸವರಾಜ ಸಿನ್ನೂರು, ವಾರ್ತಾಧಿಕಾರಿ ಬಸವರಾಜ ಕರೆಗಾರ, ಸದಸ್ಯರುಗಳಾದ ಶರಣಪ್ಪ ಬೂದಿನಾಳ, ಬಾಬುಗೌಡ ಯಾದವ ಸುಲ್ತಾನಪುರ, ಷಣ್ಮುಖ ಹೂಗಾರ, ಪ್ರಕಾಶ ಪಾಟೀಲ್ ಶಾವಂತಗೇರಾ, ಮೃತ್ಯುಂಜಯ ಯಾದವ ಪಾಲ್ಗೊಂಡಿದ್ದರು.
ಕೆಯುಡಬ್ಲ್ಯುಜೆ ಸಂತಸ :
ಪ್ರಶಸ್ತಿಗೆ ಭಾಜನರಾದ ಶಶಿಕಾಂತ ಶೆಂಬೆಳ್ಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದಿಸಿದೆ.
ಶಶಿಕಾಂತ ಶೆಂಬೆಳ್ಳಿ ಅವರು ಎರಡು ದಶಕಗಳಿಗೂ ಅಧಿಕ ವರ್ಷಗಳಿಂದ ನಿರ್ಭಿಡೆ ಹಾಗೂ ನಿಷ್ಪಕ್ಷಪಾತದಿಂದ ಮಾಡುತ್ತಿರುವ ಅವರ ಮಾಧ್ಯಮ ಸೇವೆ ಸರ್ಕಾರ ಹಾಗೂ ವಿವಿಧ ಸಂಘ, ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಬಹಳ ಸಂತೋಷದ ವಿಷಯ.
ಶಶಿಕಾಂತ ಅವರಿಗೆ ಪ್ರಶಸ್ತಿ ಬಂದಿರುವುದು ಅವರ ಕುಟುಂಬಕಷ್ಟೆ ಅಲ್ಲದೆ ಇಡೀ ಪತ್ರಿಕಾ ಸಮೂಹಕ್ಕೆ ಹೆಮ್ಮೆಯ ಸಂಗತಿ. ಈ ಪ್ರಶಸ್ತಿ ಜಿಲ್ಲೆಯ ಕೀರ್ತಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ : ಬೀದರ್ | ಮಹಿಳೆಯೊಂದಿಗೆ ಮಗು ಭಿಕ್ಷಾಟನೆ : ಮಗು ರಕ್ಷಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಪ್ರಶಸ್ತಿಗೆ ಆಯ್ಕೆ ಮಾಡಿದ ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಹಾಗೂ ಆಯ್ಕೆ ಸಮಿತಿಗೆ ಪತ್ರಕರ್ತರ ಸಂಘ ಕೃತಜ್ಞತೆ ಸಲ್ಲಿಸಿದೆ.