ವಚನಕಾರ್ತಿ ಅಕ್ಕ ಮಹಾದೇವಿ ವಚನಗಳು ಆಧ್ಯಾತ್ಮಿಕ ಆಗರವಾಗಿದ್ದು, ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ನಡೆದ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ, ʼಅಕ್ಕನ ಆದರ್ಶ ಮೈಗೂಡಿಸಿಕೊಂಡವರ ಬಾಳು ಬಂಗಾರವಾಗುತ್ತದೆʼ ಎಂದು ತಿಳಿಸಿದರು.
ʼಅಕ್ಕ ಉಡುತಡಿಯಲ್ಲಿ ಜನಿಸಿ, ಕೈ ಹಿಡಿಯಲು ಮುಂದಾದ ರಾಜ ಕೌಶಿಕನನ್ನು ಧಿಕ್ಕರಿಸಿ, ದೇವನೆ ಪತಿಯೆಂದು ಬಸವಣ್ಣನವರ ಕಲ್ಯಾಣಕ್ಕೆ ಆಗಮಿಸಿದ್ದು ಬಹು ರೋಚಕ ಹೆಜ್ಜೆ. ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿ, ಲಿಂಗಾಂಗ ಸಾಮರಸ್ಯದ ಗುರಿ ಸಾಧಿಸಿದ್ದು ವಿಶೇಷ. ಪ್ರಭುದೇವರ ಪರೀಕ್ಷೆ ಎದುರಿಸಿ, ಸೈ ಎನಿಸಿಕೊಂಡು ಅನುಭವ ಮಂಟಪದ ಮಾಣಿಕ್ಯವಾಗಿ ಪ್ರಜ್ವಲಿಸಿದರು. ಶ್ರೀಶೈಲ ಸಮೀಪದ ಕದಳಿಯಲ್ಲಿ ಐಕ್ಯವಾದ ಅಕ್ಕ ವಿಶ್ವದ ಮೊದಲ ಕವಯತ್ರಿʼ ಎಂದು ಬಣ್ಣಿಸಿದರು.
ಶಿವಯೋಗ ಸಾಧಕರ ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಶಿವಯೋಗದಲ್ಲಿ ಪ್ರಾಣ ಲಿಂಗಾರ್ಚನೆ ಹೇಳಿಕೊಟ್ಟ ಸಾಹಿತಿ ರಮೇಶ ಮಠಪತಿ ಅವರು ಮಾತನಾಡಿ, ʼಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದ ಜಗದಕ್ಕ ಅಮರಳಾದಳು. ಅಕ್ಕ ಆತ್ಮವಿಶ್ವಾಸ, ಧೈರ್ಯದ ಸಂಕೇತ. ಅಕ್ಕನ ಪ್ರತಿ ಉಸಿರು ಹೋರಾಟಮಯʼ ಎಂದು ಹೇಳಿದರು.
ʼ900 ವರ್ಷಗಳ ಹಿಂದೆ ಯೌವ್ವನದಲ್ಲಿ ಏಕಾಂಗಿಯಾಗಿ ಉಡುತಡಿಯಿಂದ ಕಲ್ಯಾಣಕ್ಕೆ, ಕಲ್ಯಾಣದಿಂದ ಕದಳಿ ವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿದ್ದು ಅಸಾಮಾನ್ಯ. ಅಕ್ಕನಂಥ ಧೀರ ಮಹಿಳೆ ಇತಿಹಾಸದಲ್ಲಿ ಮತ್ತಾರನ್ನು ಕಾಣಲಾರೇವು. ಅಕ್ಕ ಮಹಾದೇವಿ ಕನ್ನಡ ನಾಡಿನವರೆಂಬುದು ಹೆಮ್ಮೆಯ ಸಂಗತಿ. ಅಕ್ಕನ ದರ್ಶನದಿಂದ ಜೀವನ ಪಾವನವಾಗುತ್ತದೆʼ ಎಂದು ತಿಳಿಸಿದರು.
ನೀಲಮ್ಮನ ಬಳಗದ ಸಹೋದರಿಯರು ಅಕ್ಕನ ತೊಟ್ಟಿಲು ಇಟ್ಟು, ಜೋಗುಳ ಹಾಡಿ ನಲಿದರು. ಪ್ರತಿ ಮನೆಯಲ್ಲಿ ಅಕ್ಕ ಮಹಾದೇವಿ ಜನಿಸಿ ಬರಲೆಂದು ಹರಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ ಸಾಹಿತ್ಯ ಹೊರ ಜಗತ್ತಿಗೆ ಪಸರಿಸುವ ಅಗತ್ಯವಿದೆ : ವಿಕ್ರಮ ವಿಸಾಜಿ
ಪ್ರಮುಖರಾದ ಅಶೋಕ ಎಲಿ, ಮಾಣಿಕಪ್ಪ ಗೋರನಾಳೆ, ರಾಜಕುಮಾರ ಪಾಟೀಲ, ಚನ್ನಬಸಪ್ಪ ಹಂಗರಗಿ, ಅಣವೀರ ಕೊಡಂಬಲ, ಮಾರುತಿ ಪಾಟೀಲ, ಜಗನ್ನಾಥ ಚಿಮಕೋಡೆ, ವೈಜಿನಾಥ ಹುಣಸಗೇರಿ, ವೀರೇಶ್ ರೂಗನ್, ಅಭಿಷೇಕ ಮಠಪತಿ ಉಪಸ್ಥಿತರಿದ್ದರು.
ಪರುಷ ಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀದೇವಿ ಮಠಪತಿ, ನೀಲಮ್ಮ ರೂಗನ್, ಲಾವಣ್ಯ ಹಂಗರಗಿ, ಶಾಮಲಾ ಎಲಿ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಸಿ.ಎಸ್. ಗಣಾಚಾರಿ ಭಕ್ತಿ ದಾಸೋಹಗೈದರು. ಸಂಗೀತಾ ಗಣಚಾರಿ ಸ್ವಾಗತಿಸಿದರು.