ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ ತಂದುಕೊಡುವ ಅಗತ್ಯವಿದೆ. ಎರಡು ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಾಗಲು ಅನುವಾದ ಅಗತ್ಯವಿದೆʼ ಎಂದು ವಿಮರ್ಶಕ ಪ್ರೊ. ವಿಕ್ರಮ ವಿಸಾಜಿ ಹೇಳಿದರು.
ಬಸವಕಲ್ಯಾಣದದ ಅಕ್ಕ ನಾಗಮ್ಮನವರ ಗವಿ ಮಂಟಪದಲ್ಲಿ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವ ಪೀಠದ ಸಹಯೋಗದಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ವಚನಗಳ ಅನುಸಂಧಾನ ಹಾಗೂ ಅನುವಾದ ಆಯಾಮ’ ಕುರಿತ ಪ್ರತಿಷ್ಠಾನದ 93ನೇ ಉಪನ್ಯಾಸ ಮತ್ತು ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ʼಅನುವಾದದಿಂದ ಜಗತ್ತಿನ ಎಲ್ಲ ಜನಾಂಗಗಳ ನಡುವೆ ಅರ್ಥಪೂರ್ಣವಾದ ತಿಳುವಳಿಕೆ ಸಾಧ್ಯವಾಗುತ್ತದೆ. ಗ್ರೀಕ್, ಮಧ್ಯಪ್ರಾಚ್ಯ, ಆಫ್ರಿಕನ್, ಯೂರೋಪಿನ ಸಾಹಿತ್ಯ ಅನುವಾದದ ಮೂಲಕ ಅರ್ಥ ಮಾಡಿಕೊಂಡಿದ್ದೇವೆ. ಈಗ ಭಾರತದ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯ ಜಗತ್ತಿನ ಬೇರೆ ಬೇರೆ ಭಾಷೆಗೆ ಹೋಗುವ ಅಗತ್ಯವಿದೆ. ಬಸವ ಸಮಿತಿ ಹಾಗೂ ಸಿಯುಕೆ ವಚನಗಳನ್ನು ಅನುವಾದಿಸುವ ಮೂಲಕ ಜಾಗತಿಕ ಸಾಹಿತ್ಯ ವಲಯಕ್ಕೆ ವಚನಗಳನ್ನು ಕೊಂಡೊಯ್ಯುವ ಕೆಲಸ ಮಾಡುತ್ತಿವೆʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಬಸವ ಪೀಠದ ಸಂಯೋಜಕ ಪ್ರೊ. ಗಣಪತಿ ಸಿನ್ನೂರ ಮಾತನಾಡಿ, ʼಭಾಷಾಂತರದಿಂದ ಬೇರೆ ಭಾಷಿಕ ಲೋಕಕ್ಕೆ ವಚನಗಳ ಸಾಂಸ್ಕೃತಿಕ ಚಹರೆ ಪರಿಚಯವಾಗುತ್ತದೆ. ವಚನಗಳ ತಾತ್ವಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮ ಹೊರ ಜಗತ್ತಿಗೆ ಪರಿಚಯಿಸಲು ಅನುವಾದ ಮಹಾಮಾರ್ಗವಾಗಿದೆʼ ಎಂದರು.
ʼಕಳೆದ ಎರಡುವರೆ ವರ್ಷದಿಂದ ಬಸವ ಸಮಿತಿ ಜೊತೆಗೆ ಕಲಬುರ್ಗಿಯ ಸಿಯುಕೆ, ಬೆಂಗಳೂರು ನಗರ ವಿವಿ ಜರ್ಮನ್, ಸ್ಪಾನಿಷ್, ಜಾಪನಿಸ್ ಈ ಮೂರು ಭಾಷೆಗಳಲ್ಲಿ ವಚನಗಳ ಅನುವಾದದ ಕೆಲಸ ಮಾಡಿವೆ. ಈ ಮೂಲಕ ಈ ಭಾಗದ ಕನ್ನಡ ಸಾಹಿತ್ಯದ ಮುಖ್ಯ ದರ್ಶನವನ್ನು ಜಗತ್ತಿಗೆ ಪರಿಚಯಿಸುವ ಅಳಿಲು ಸೇವೆ ಸಲ್ಲಿಸುತ್ತಿವೆʼ ಎಂದು ಹೇಳಿದರು.
ಬೆಂಗಳೂರು ನಗರ ವಿವಿ ಪ್ರಾಧ್ಯಾಪಕಿ ಪ್ರೊ.ಭಾನುಮತಿ ವಿಜಯ್ ಕೃಷ್ಣನ್ ಮಾತನಾಡಿ, ʼವಚನಗಳು ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಬಹುದೊಡ್ಡ ಸ್ಥಾನ ಪಡೆದಿವೆ. ಅವುಗಳ ಓದು ಒಂದು ತತ್ವಶಾಸ್ತ್ರೀಯ ಪಯಣವಿದ್ದಂತೆ. ವಚನ ಸ್ವಾತಂತ್ರ್ಯ ಮತ್ತು ಸಮಾನತೆಯ ಸಮಾಜದ ಪರಿಕಲ್ಪನೆ ರೂಪಿಸಿದ ದಾರ್ಶನಿಕ ಪಠ್ಯಗಳು. ಇವುಗಳ ಬಗೆಗೆ ಹೊರ ಜಗತ್ತಿಗೆ ಅರಿವು ಮೂಡಿಸುವ ಅಗತ್ಯವಿದೆ. ಭಾಷಾಂತರಗೊಂಡ ವಚನಗಳು ಮುಂದೊಂದು ದಿನ ವಿದೇಶಗಳಲ್ಲಿ ಸಂಶೋಧನಾತ್ಮಕ ಆಯಾಮ ಪಡೆಯುತ್ತವೆʼ ಎಂದರು.
ಬೆಂಗಳೂರು ನಗರ ವಿವಿ ಪ್ರಾಧ್ಯಾಪಕಿ ಪ್ರೊ. ಸುಧಾ ಶ್ರೀಧರ್ ಮಾತನಾಡಿ, ʼವಚನಾನುವಾದವು ಕನ್ನಡದ ಸಾಂಸ್ಕೃತಿಕ ಜಗತ್ತಿನ ಹೊಸ ಚಹರೆ ಹೊರ ಜಗತ್ತಿಗೆ ಪರಿಚಯಿಸುವ ಸಣ್ಣ ಪ್ರಯತ್ನವಾಗಿದೆ. ಮಹಿಳೆ ಅಸ್ತಿತ್ವದ, ಮಾನವೀಯತೆಯ ನೆಲೆಯ, ಜಾತ್ಯತೀತ ಆಲೋಚನೆಯ, ದಾರ್ಶನಿಕ ಪ್ರಭೆಯ ತಾತ್ವಿಕ ವಾಗ್ವಾದಗಳು ವಚನಗಳು ಪ್ರತಿಪಾದಿಸಿವೆʼ ಎಂದರು.
ಸಿಯುಕೆ ಪ್ರಾಧ್ಯಾಪಕ ಡಾ.ಪಿ.ಕುಮಾರ್ ಮಂಗಲಮ್ ಮಾತನಾಡಿ, ʼವಚನಗಳು ಅತ್ಯಂತ ವಿಸ್ಮಯ ಹುಟ್ಟಿಸಿವೆ. ಸಾಂಸ್ಕೃತಿಕ , ಅಭೌತಿಕವಾದ ಪರಿಭಾಷೆಯಲ್ಲಿರುವ ವಚನಗಳ ಆಧ್ಯಾತ್ಮ ತುಂಬಾ ಭಿನ್ನವಾಗಿದೆ. ವಚನ ಸಾಹಿತ್ಯ ಹೇಳುವ ತತ್ವಜ್ಞಾನ , ಇಷ್ಟಲಿಂಗ, ದಾಸೋಹ, ಕಾಯಕ ಸೇರಿ ಹಲವು ತಾತ್ವಿಕ ಪರಿಕಲ್ಪನೆಗಳು ಸ್ಪಾನಿಷ್ ಭಾಷೆಗೆ ಅನುವಾದಿಸುವಾಗ ಸವಾಲು ಸೃಷ್ಟಿಸಿದವುʼ ಎಂದರು.
ʼಜಾಪನಿಸ್ ಮತ್ತು ಭಾರತದ ಅಥವಾ ಕನ್ನಡ ಎರಡರಲ್ಲೂ ಹಲವು ಸಾಂಸ್ಕೃತಿಕ ಭಿನ್ನತೆಗಳಿವೆ. ವಚನಗಳನ್ನು ಜಪಾನ್ ಭಾಷೆಗೆ ಭಾಷಾಂತರಿಸುವಾಗ ಪದದ ಅರ್ಥದ ಜೊತೆ ಸಾಂಸ್ಕೃತಿಕ ಅರ್ಥಕ್ಕೂ ಮಹತ್ವ ನೀಡಲಾಗಿದೆʼ ಎಂದು ಸಿಯುಕೆ ಪ್ರಾಧ್ಯಾಪಕಿ ಪ್ರೊ. ಪಿಯಾಲಿ ರಾಯ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ಯಾಚಾರ ಯತ್ನ ಮಾಮೂಲು ಸಂಗತಿಯೇ ಗೃಹಸಚಿವರೇ?
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸಿಯುಕೆ ಪ್ರಾಧ್ಯಾಪಕ ಶಿವಮ್ ಮಿಶ್ರಾ, ಬಸವ ಸಮಿತಿಯ ನವಿನ್, ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ. ಹುಡೇದ, ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಶರಣಪ್ಪ ಸೇರಿ ಹಲವರಿದ್ದರು. ಡಾ.ಶಿವಾಜಿ ಮೇತ್ರೆ ನಿರೂಪಿಸಿದರು.