ಬೀದರ್‌ನ ಹಿರಿಯ ಪತ್ರಕರ್ತ ಕಾಜಿ ಅಲಿಯೋದ್ದೀನ್ (ಅಲಿಬಾಬಾ) ಅವರು ಪ್ರಸಕ್ತ ಸಾಲಿನ ಕರ್ನಾಟಕ ಉರ್ದು ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕೆಎಂಡಿಸಿ ಸಭಾಂಗಣದಲ್ಲಿ ನಾಳೆ (ಫೆ.27) ನಡೆಯಲಿರುವ ಸಮಾರಂಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನಾಲ್ಕು ದಶಕಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಜಿ ಅಲಿಯೊದ್ದಿನ್ ಅವರು ಜಿಲ್ಲೆಯ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದಾರೆ. ‘ಅಲಿಬಾಬಾ’ ಎಂದೇ ಚಿರಪರಿಚಿತರಾದ ಅವರು ಸರಳತೆ, ನೇರ ನಡೆ- ನುಡಿಗೆ ಹೆಸರಾಗಿದ್ದಾರೆ.
ತಮ್ಮ ಹರಿತವಾದ ಲೇಖನಿ ಮೂಲಕ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ. ಶೋಷಿತರು, ನಿರ್ಗತಿಕರು, ಅಸಹಾಯಕರ ಪರ ಗಟ್ಟಿ ಧ್ವನಿಯಾಗಿದ್ದಾರೆ. ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿ, ಬೀದರ್ ಜಿಲ್ಲಾ ಆಡಳಿತ, ವಿವಿಧ ಸಂಘ ಸಂಸ್ಥೆಗಳ ಹಲವು ಪ್ರಶಸ್ತಿ-ಸಮ್ಮಾನಗಳಿಗೆ ಭಾಜನರಾಗಿದ್ದಾರೆ.
ಬೀದರ್ ಉತ್ಸವದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಪ್ರಖ್ಯಾತ ಪತ್ರಿಕಾ ಛಾಯಾಗ್ರಾಹಕ ಗುಲಾಂ ಮುಂತಾಕ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ ಹಿರಿಮೆಯೂ ಇವರದ್ದಾಗಿದೆ. ಕಾಜಿ ಅಲಿಯೋದ್ದೀನ್ ಅವರು ಬೀದರ್ ಕೀ ಆವಾಜ್ ಹಿಂದಿ ದಿನ ಪತ್ರಿಕೆ ಹಾಗೂ ಸುರ್ಖ್ ಝಮೀನ್ ಉರ್ದು ದಿನಪತ್ರಿಕೆಯ ಉಪ ಸಂಪಾದಕರಾಗಿದ್ದಾರೆ.