ಎಕಲಾರ (ತಾಂಡ)ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿರಂತರವಾಗಿ ಗೈರು ಹಾಜರಾಗುತ್ತಿದ್ದಾರೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ, ಮಕ್ಕಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ. ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಒತ್ತಾಯಿಸಿದೆ.
ಬೀದರ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿರುವ ಕೆಆರ್‌ಎಸ್ ಕಾರ್ಯಕರ್ತರು, “ಜಿಲ್ಲೆಯ ಔರಾದ್ ತಾಲೂಕಿನ ಎಕಲಾರ (ತಾಂಡ)ದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ಮುಖ್ಯ ಶಿಕ್ಷಕ, ಇನ್ನೊಬ್ಬರು ಸಹ ಶಿಕ್ಷಕಿಯಾಗಿದ್ದಾರೆ. ಮುಖ್ಯಗುರುಗಳೇ ನಿಗದಿತ ಸಮಯಕ್ಕೆ ಶಾಲೆಗೆ ಬರುವುದಿಲ್ಲ. ಒಂದು ವೇಳೆ ಶಾಲೆಗೆ ಬಂದರೂ, ಕೇವಲ ಹಾಜರಾತಿಗೆ ಸಹಿ ಹಾಕಿ ಮತ್ತೆ ವಾಪಸಾಗುತ್ತಾರೆ ಎಂಬುದಾಗಿ ಗ್ರಾಮಸ್ಥರು ನಮ್ಮ ಗಮನಕ್ಕೆ ತಂದಿದ್ದಾರೆ” ಎಂದು ಆರೋಪಿಸಿದರು.
“ಸದರಿ ಶಾಲೆಗೆ ಭೇಟಿ ನೀಡಿದಾಗ ಮುಖ್ಯ ಶಿಕ್ಷಕ ಶಾಲೆಯಲ್ಲಿ ಇಲ್ಲದಿರುವುದನ್ನು ಕಂಡು ಔರಾದ್‌ನ ಕ್ಷೇತ್ರ ಶಿಕ್ಷಣಾಧಿಕಾರಗಳ ಗಮನಕ್ಕೆ ತರಲಾಗಿತ್ತು. ಸಿಆರ್‌ಸಿ ಅವರು ಮುಖ್ಯ ಶಿಕ್ಷಕನನ್ನು ಸ್ಥಳಕ್ಕೆ ಕರೆಸಿ, ಎಲ್ಲರ ಸಮ್ಮುಖದಲ್ಲಿ ಹಾಜರಾತಿ, ಪುಸ್ತಕ ಪರಿಶೀಲನೆ ನಡೆಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ 28 ದಿನಳಿದ್ದು, ಇಲ್ಲಿನ 29ನೇ ತಾರಿಖಿನಲ್ಲಿಯೂ ಸಹಿ ಮಾಡಿದ್ದಾರೆ. ಇದರಿಂದ ಮುಖ್ಯ ಶಿಕ್ಷಕ ವಾರಕ್ಕೊ, ತಿಂಗಳಿಗೋ ಒಮ್ಮೆ ಶಾಲೆಗೆ ಬಂದು ಸಿಹಿ ಮಾಡಿ ಹೋಗುತ್ತಾರೆ. ಪ್ರತಿ ದಿನ ಶಾಲೆಗೆ ಬರುವುದಿಲ್ಲ ಎಂಬುವದು ಮೇಲ್ನೋಟಕ್ಕೆ ಎದ್ದು ಕಾಣುತ್ತಿತ್ತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸರ್ಕಾರ, ಕೃಷಿ ವಿಜ್ಞಾನಿಗಳು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ; ರೈತ ಸಂಘ ಕಿಡಿ
“ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕಾದ ಶಿಕ್ಷಕರೇ ಹೀಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮಕ್ಕಳ ಶೈಕ್ಷಣಿಕ ಬದುಕು ರೂಪುಗೊಳ್ಳಲು ಹೇಗೆ ಸಾಧ್ಯ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು” ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ, ಉಪಾಧ್ಯಕ್ಷ ಶಿವರಾಜ ಶ್ರೀಮಂಗಲೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮೇತ್ರೆ, ಹಣಮಂತ ಮಟ್ಟೆ ಸೇರಿದಂತೆ ಇತರರು ಇದ್ದರು.