ಬೀದರ್ ಜಿಲ್ಲೆಯ ಸರಕಾರಿ ಕಚೇರಿ ಮತ್ತು ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಸುಧಾರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಸಂಬಂಧ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
‘ರಾಜ್ಯದ ನಾನಾ ಭಾಗಗಳಲ್ಲಿ 500ಕ್ಕೂ ಹೆಚ್ಚು ಸರಕಾರಿ ಕಚೇರಿ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಲೋಪದೋಷಗಳನ್ನು ಸರಿಪಡಿಸಲು ಕ್ರಮ ಜರುಗಿಸುವಂತೆ ತಿಳಿಸಲಾಗಿದೆ. ಈ ಬಗ್ಗೆ ಸಮಗ್ರ ಕ್ರಮ ಕೈಗೊಳ್ಳಲು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ. ಆದರೆ ಇಲ್ಲಿಯೂ ವ್ಯವಸ್ಥೆ ಸುಧಾರಣೆಯಾಗಿಲ್ಲ ಸಕಾಲಕ್ಕೆ ಜನರ ಕೆಲಸ-ಕಾರ್ಯಗಳು ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಉತ್ತಮ ಸೇವೆ ಸಿಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಅಭಿಯಾನ ನಿರಂತರ ನಡೆಸಲಾಗುತ್ತಿದೆ. 15 ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಮತ್ತು ದಕ್ಷ ಆಡಳಿತ ನೀಡಬೇಕು. ಜಿಲ್ಲೆಯ ಸರಕಾರಿ ಕಚೇರಿ ಮತ್ತು ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಸುಧಾರಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಜರಂಗ ಪವಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ತುಕಾರಾಮ ಗೌರೆ, ಶಿವರಾಜ ಶ್ರೀಮಂಗಲೆ, ದಯಾನಂದ ಸ್ವಾಮಿ, ಪ್ರಭು ಬಾಮಂದಿ, ಸಂಗಪ್ಪಾ ಬಂಡೆ, ಸಾಯಿನಾಥ ಗನ್ನೆ, ಭೀಮರಾವ ಫತ್ತೆಪೂರೆ, ವಿಠಲರಾವ ಚಟ್ನಾಳಕರ, ಬಾಲಭದ್ರ ದಾಮ , ತಾನಾಜಿ ಜಾಧವ, ರಾಘವೇಂದ್ರ, ಶರಣಬಸಪ್ಪಾ, ಶಿವರಾಜ, ಈರಣ್ಣಾ, ಹಣಮಂತ, ಸಿದ್ದಲಿಂಗ, ಜೈ ಭೀಮ, ರಾಜು, ಅವಿನಾಶ, ಗೌರಿಶ, ಶಿವಾಜಿ, ಮಲ್ಲಿಕಾರ್ಜುನ, ವಿಜಯಕುಮಾರ ಉಪಸ್ಥಿತರಿದ್ದರು.