ಬಸವಣ್ಣವರ ವಿಚಾರಧಾರೆಗಳು ಅತ್ಯಂತ ಶ್ರೇಷ್ಠವಾಗಿವೆ. ಬಸವತತ್ವಕ್ಕೆ ಸಮರ್ಪಿಸಿಕೊಂಡವರು ಎಂತಹ ಪರಿಸ್ಥಿತಿ ಎದುರಾದರೂ ವಿಚಲಿತರಾಗದೆ ತತ್ವಕ್ಕೆ ಬದ್ಧರಾಗಬೇಕೆಂದು ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ವಚನ ಮಂಟಪ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ʼಇಂದು ಬಸವ ತತ್ವದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಬಸವಪರ ಸಂಘಟನೆಗಳು ಇನ್ನಷ್ಟು ಸಂಘಟಿತರಾಗಬೇಕು. ಬಸವಾನುಯಾಯಿಗಳು ಜಾಗೃತರಾಗಿರಬೇಕು. ಬಸವತತ್ವದ ಬೆಳವಣಿಗೆಗೆ ಶ್ರಮಿಸುತ್ತಿರುವವರನ್ನು ಎಲ್ಲರೂ ಪ್ರೋತ್ಸಾಹಿಸಬೇಕುʼ ಎಂದು ಹೇಳಿದರು.
ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಸಾನಿಧ್ಯ ವಹಿಸಿ ಮಾತನಾಡಿ, ʼಬಸವಣ್ಣನವರು ಜಗಕ್ಕೆ ಜ್ಯೋತಿಯಾಗಿದ್ದರು. ಅವರ ಅನುಯಾಯಿಗಳು ವೈಯಕ್ತಿಕ ಬದುಕಿಗಾದರೂ ಜ್ಯೋತಿಯಾಗಬೇಕು. ಬಸವಣ್ಣನವರು ಜಗಜ್ಯೋತಿ ಎನಿಸಿಕೊಂಡ ಏಕೈಕ ಮಹಾಪುರುಷರು. ಆ ಪದವಿ ಇನ್ನಾರಿಗೂ ಇಲ್ಲʼ ಎಂದು ಹೇಳಿದರು.
ʼಬಸವರಾಜ ಧನ್ನೂರ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ವಚನಗಳ ಚಿಂತನ- ಮಂಥನಕ್ಕಾಗಿ ಮಾಸಿಕ ವಚನ ಮಂಟಪ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಅವರು ʼಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದೆʼ ವಿಷಯ ಕುರಿತು ಮಾತನಾಡಿ, ʼಬಸವಣ್ಣನವರು 12ನೇ ಶತಮಾನದಲ್ಲಿ ಮರ್ತ್ಯದ ಮಹಾಮನೆ ಕಟ್ಟಿದ್ದರು. ಆ ಮಹಾಮನೆ ಪ್ರೀತಿ, ಆನಂದ, ಮಾನವೀಯತೆ, ಸಮಾನತೆಯಿಂದ ತುಂಬಿ ತುಳುಕುತ್ತಿತ್ತು. ಅಂತಹ ಮಹಾ ಮನೆ ಕಟ್ಟಿದ್ದಕ್ಕಾಗಿಯೇ ಜನರು ಬಸವಣ್ಣನವರತ್ತ ಆಕರ್ಷಿತರಾದರು. ಜಗತ್ತಿನ ಮೂಲೆ ಮೂಲಗಳಿಂದ ಕಲ್ಯಾಣದೆಡೆಗೆ ಬಂದರುʼ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ʼಸದ್ಯ ಬಸವತತ್ವ ಪ್ರಚಾರ ಹೆಚ್ಚಾಗಿ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವತತ್ವ ಪಸರಿಸಲು ಮಠ-ಮಾನ್ಯಗಳು ಬಹುಭಾಷಾ ತತ್ವ ಪ್ರಚಾರಕರನ್ನು ತಯಾರು ಮಾಡಬೇಕಿದೆ. ಹಿಂದಿ, ಇಂಗ್ಲಿಷ್‍ನಲ್ಲಿ ಬಸವ ತತ್ವದ ಪ್ರವಚನ ಮಾಡುವವರ ಕೊರತೆಯಿದ್ದು, ಅದನ್ನು ನೀಗಿಸಬೇಕಿದೆʼ ಎಂದು ತಿಳಿಸಿದರು.
ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು.ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡ ಹಿರಿಯ ಸಿವಿಲ್ ಎಂಜಿನಿಯರ್ ಹಾವಶೆಟ್ಟಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಆದಿತ್ಯ ಪಾಂಚಾಳ ವಚನ ಗಾಯನ ನಡೆಸಿಕೊಟ್ಟರು.
ಇದನ್ನೂ ಓದಿ : ಬೀದರ್ | ರಿಶೈನ್ ಸಂಸ್ಥೆಯ ʼಹಸಿವು ಮುಕ್ತ ಸಮಾಜʼ ಕಾರ್ಯಕ್ಕೆ ಸಂಸದ ಸಾಗರ ಖಂಡ್ರೆ ಶ್ಲಾಘನೀಯ
ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಖಜಾಂಚಿ ಬಂಡೆಪ್ಪ ಗಡ್ಡೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಗೌರವ ಸಲಹೆಗಾರ ಶರಣಪ್ಪ ಮೈಲೂರಕರ್ ಲಾಡಗೇರಿ ಉಪಸ್ಥಿತರಿದ್ದರು. ಉಚಾ ಮಿರ್ಚೆ ಸ್ವಾಗತಿಸಿದರು. ಸ್ವರೂಪರಾಣಿ ಪಾಟೀಲ ನಿರೂಪಿಸಿದರು. ಉಮೇಶ ಗಾಯಗೊಂಡ ವಂದಿಸಿದರು. ರಾಜಪ್ಪ ಹಜ್ಜರಗಿ ಭಕ್ತಿ ದಾಸೋಹಗೈದರು.