ಎರಡು ಎಕರೆ ಜಮೀನು ಪೋಡಿ ಮಾಡಿ ವರ್ಗಾವಣೆ ಮಾಡಿಕೊಡಲು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು 6 ಸಾವಿರ ರೂ. ಹಣವನ್ನು ಪಡೆಯುತ್ತಿದ್ದ ಭೂಮಾಪನ ಅಧಿಕಾರಿಯನ್ನು ಬೀದರ್ ಲೋಕಾಯುಕ್ತ ಪೊಲೀಸರು ಸಾಕ್ಷಿಸಹಿತ ಹಿಡಿದಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಭೂಮಾಪನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿದ್ಧಾರ್ಥ(28) ಎಂಬುವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದು ತಿಳಿದುಬಂದಿದೆ.
ಬೀದರ್ ತಾಲೂಕಿನ ಹಿಪ್ಪಳಗಾಂವ ಗ್ರಾಮದ ನಿವಾಸಿ ವೆಂಕಟರಾವ ತಂದೆ ಮುಕುಂದರಾವ ಶೇರಿಕರ ಎಂಬುವವರು ದೂರುದಾರನಾಗಿದ್ದು, ಇವರು 4 ಎಕರೆ ಜಮೀನಿನಲ್ಲಿ 2 ಎಕರೆ ಜಮೀನನ್ನು ತಮ್ಮ ಕಿರಿಯ ಸೊಸೆ ಸೀಮಾಳ ಹೆಸರಿಗೆ ಪೋಡಿ ಮಾಡಿ ವರ್ಗಾವಣೆ ಮಾಡಲು ಭೂಮಾಪಕ ಅಧಿಕಾರಿ ಸಿದ್ಧಾರ್ಥ ಅವರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 2,500 ರೂಪಾಯಿ ವೆಂಕಟರಾವ ಮುಂಗಡವಾಗಿ ನೀಡಿದ್ದು, ಇನ್ನುಳಿದ ಹಣ 7,500 ಕೊಡುವಂತೆ ಬೇಡಿಕೆ ಇಟ್ಟಿದ್ದರಿಂದ ಏನಾದರೂ ಕಡಿಮೆ ಮಾಡಿ ಎಂದಾಗ ಆರೋಪಿ ಸಿದ್ಧಾರ್ಥ 6 ಸಾವಿರ ರೂ. ನೀಡುವಂತೆ ಹೇಳಿದ್ದಾನೆ. ಈ ಕುರಿತು ವೆಂಕಟರಾವ ಬೀದರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರೈತರಿಗೆ ಬರ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮಾಜಿ ಪ್ರಧಾನಿಗೆ ಮನವಿ
ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಲೋಕಾಯುಕ್ತ ಎಸ್‌ಪಿ ಎ ಆರ್ ಕರ್ನೂಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಎನ್ ಎಂ ಓಲೇಕಾರ ಅವರ ನೇತೃತ್ವದಲ್ಲಿ ಪಿಐಗಳಾದ ಸಂತೋಷ ರಾಠೋಡ, ಪ್ರದೀಪ ಕೊಳ್ಳಾ, ಬಾಬಾಸಾಹೇಬ ಪಾಟೀಲ್, ವಾಹೀದ್ ಹುಸೇನ್ ಕೋತ್ವಾಳ ಹಾಗೂ ಸಿಬ್ಬಂದಿಗಳು ಭೂಮಾಪಕ ಸಿದ್ಧಾರ್ಥ ಲಂಚದ ಹಣ 6 ಸಾವಿರ ರೂ. ದೂರುದಾರನಿಂದ ಪಡೆಯುತ್ತಿದ್ದಾಗ ಏಕಾಏಕಿ ದಾಳಿ ನಡೆಸಿ ಲಂಚದ ಹಣದೊಂದಿಗೆ ಸಾಕ್ಷಿಸಹಿತ ಸಿದ್ಧಾರ್ಥನನ್ನು ಬಂಧಿಸಿ ಆತನಿಂದ ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಈ ಕುರಿತು ಬೀದರ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.