ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಬೀದರ್‌ನಲ್ಲಿ ಆಗಸ್ಟ್ 7ರ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಮಂಗಳವಾರ ವಿವಿಧ ಸಂಘ- ಸಂಸ್ಥೆಗಳ ಪ್ರಮುಖರು, ಸಾಮಾಜಿಕ ಚಿಂತಕರು ಒಗ್ಗೂಡಿ ರೂಪಿಸಿದ ಪ್ರಜ್ಞಾವಂತ ನಾಗರಿಕರ ವೇದಿಕೆಯ ಪೂರ್ವಭಾವಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ.
“ಮಣಿಪುರ ಹಿಂಸಾಚಾರದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಚರ್ಚುಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದ 50 ಸಾವಿರಕ್ಕೂ ಅಧಿಕ ಕಟುಂಬಗಳು ಬೀದಿ ಪಾಲಾಗಿವೆ. ಇದಕ್ಕೆಲ್ಲ ಯಾರು ಹೊಣೆಗಾರರು. ಇಬ್ಬರು ಹೆಣ್ಣುಮಕ್ಕಳನ್ನು ನಗ್ನ ಮಾಡಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ” ಎಂದು ಸಂಘಟನಾಕಾರರು ತಿಳಿಸಿದರು.
“ದುರ್ಘಟನೆಗೆ ಸಾಕ್ಷಿಯಾದ ಮಣಿಪುರ ರಾಜ್ಯ ಸರ್ಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಹಲವು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮಣಿಪುರ ಸರ್ಕಾರವನ್ನು ವಜಾಗೊಳಿಸಿ: ಸಂಘಟನೆಗಳ ಆಗ್ರಹ
ಸಭೆಯಲ್ಲಿ ಸಂಘ ಸಂಸ್ಥೆಗಳ ಪ್ರಮುಖರುಗಳಾದ ಅಬ್ದುಲ್ ಖದೀರ್, ಅನಿಲ್ ಕುಮಾರ ಬೆಲ್ದಾರ್, ದರ್ಬಾರ್ ಸಿಂಗ್, ಪೂಜ್ಯ ಭಧಂತಿ ಬೋಧಿ ಪ್ರಜ್ಞಾ, ಮಾರುತಿ ಬೌದ್ಧೆ, ಎಸ್ ಎಂ ಜನವಾಡಕರ್, ಭಾರತಿ ವಸ್ತ್ರದ, ವಿನೋದ್ ರತ್ನಾಕರ್, ಮಹೇಶ್ ಗೊರನಾಳಕರ್, ಜಗದೀಶ್ವರ ಬಿರಾದಾರ, ಓಂಪ್ರಕಾಶ್ ರೊಟ್ಟೆ, ಸಾವಿತ್ರಿ ಚಿಕ್ಕಮಠ, ನಿಜಾಮೋದ್ದೀನ್, ರಫೀಕ್ ಅಹ್ಮದ್, ಬಸವರಾಜ ಮಾಳಗೆ, ಪ್ರಕಾಶ್ ರಾವಣ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಇದ್ದರು.