ಜಿಲ್ಲೆಯಲ್ಲಿ ದಲಿತರು ಹಾಗೂ ಇತರೆ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯ ಮುಖ್ಯರಸ್ತೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದರು.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ದಲಿತರ ಮೇಲೆ ದೌರ್ಜನ್ಯ, ಜಾತಿನಿಂದನೆ, ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗಿವೆ. ಭಾಲ್ಕಿ ತಾಲ್ಲೂಕಿನ ಮಳಚಾಪೂರದಲ್ಲಿ ಸರ್ಕಾರದಿಂದ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾ ಮೇಲೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿ, ಮೆರವಣಿಗೆಗೆ ಅಡ್ಡಿಪಡಿಸಿದ್ದರು. ಇದುವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಭಾಲ್ಕಿ ತಾಲ್ಲೂಕಿನ ತಳವಾಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಮಹಿಳೆಯೊಬ್ಬರು ಜಾತಿ ನಿಂದನೆ ಮಾಡಿದ ಕುರಿತು ಪ್ರಕರಣ ದಾಖಲಾದರೂ ಕಾನೂನು ಕ್ರಮ ಕೈಗೊಂಡಿಲ್ಲ. ಭಾಲ್ಕಿ ತಾಲ್ಲೂಕಿನ ಚಳಕಾಪೂರದಲ್ಲಿ ದಲಿತರ ಕೇರಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದಲಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪ್ರಕರಣ ದಾಖಲಾಗಿದ್ದರೂ ಯಾರನ್ನೂ ಬಂಧಿಸಿಲ್ಲ. ಆದರೆ, 118 ಜನ ದಲಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

‘ಬೀದರ್ ತಾಲ್ಲೂಕಿನ ವಿಳಾಸಪೂರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಭೀಮಾ ಕೋರೆಗಾಂವ್ ವಿಜಯೋತ್ಸವದ ವೇಳೆ ಬಾಬಾಸಾಹೇಬರ ಫ್ಲೆಕ್ಸ್ ಹರಿದು ಅವಮಾನಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಕಾಟಾಚಾರಕ್ಕೆ ಬಂಧಿಸಿ ಬಿಡುಗಡೆಗೊಳಿಸಲಾಗಿದೆ. ಔರಾದ್ ತಾಲ್ಲೂಕಿನ ಬೇಡಕುಂದಾ ಗ್ರಾಮದ ದಲಿತ ಸಮುದಾಯದ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಆತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪತ್ರಕರ್ತ ರವಿ ಭೂಸಂಡೆ ಮೇಲೆ ಹಲ್ಲೆ ನಡೆಸಿದ ಅರಣ್ಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾದ ಇನ್ನೂ ಮೂವರ ವಿರುದ್ಧ ಕ್ರಮ ಕೈಗೊಂಡಿಲ್ಲ. ದಲಿತರ ಇನಾಮ್ ಜಮೀನು ಸರ್ಕಾರಿ ಭೂಮಿಯೆಂದು ಒತ್ತುವರಿ ಮಾಡಲಾಗಿದೆ’ ಎಂದು ದೂರಿದರು.
‘ಜಿಲ್ಲೆಯಲ್ಲಿ ನಿತ್ಯ ಕೊಲೆ, ದರೋಡೆಗಳು ಸಾಮಾನ್ಯವಾಗಿವೆ. ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದಲ್ಲಿ ದರೋಡೆಕೋರರ ಗುಂಡಿಗೆ ಒಬ್ಬರು ಸಾವನ್ನಪ್ಪಿದರೂ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಮೃತರ ಕುಂಟುಂಬಕ್ಕೆ ಸರ್ಕಾರದಿಂದ ಯಾವುದೇ ರೀತಿ ಪರಿಹಾರ ನೀಡಿಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಪ್ರಭಾವ ಬಳಸಿಕೊಂಡು ಹೋರಾಟಗಾರರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೋಲೆ ಮೇಲೆ ಸುಳ್ಳು ಕೇಸ್ ದಾಖಲಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಮೂಲಕ ಕಿರುಕುಳ ಕೊಡಿಸಿದ್ದಾರೆ. ಉಸ್ತುವಾರಿ ಸಚಿವರ ಮತಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅವರು ಸರಿಯಾಗಿ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಕೂಡಲೇ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ವರ್ಗಾವಣೆಗೊಳಿಸಬೇಕು. ಜಿಲ್ಲೆಯಾದ್ಯಂತ ದಲಿತರ ಮೇಲಿನ ಕೇಸುಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಮನವಿ ಸ್ವೀಕರಿಸಲು ಬಂದಾಗ ಪ್ರತಿಭಟನಾಕಾರರು ನಿರಾಕರಿಸಿ ಜಿಲ್ಲಾಧಿಕಾರಿಯೇ ಬಂದು ಸ್ವೀಕರಿಸಬೇಕೆಂದು ಪಟ್ಟು ಹಿಡಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು 4ಗಂಟೆ ಸುಮಾರಿಗೆ ಬಂದು ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾಧಿಕಾರಿ ಬರಲು ವಿಳಂಬವಾಗಿದ್ದರಿಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಆಹಾರ ಸೇವಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್ | ದೀರ್ಘಾವಧಿ ಠಿಕಾಣಿ ಹೂಡಿದ್ದ ಅಧಿಕಾರಿಗಳ ವರ್ಗಾವಣೆಗೆ ಆಗ್ರಹ
ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ಅಧ್ಯಕ್ಷ ವಿನೋದ ರತ್ನಾಕರ, ಗೌರವಾಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ, ಪ್ರಧಾನ ಕಾರ್ಯದರ್ಶಿ ಅಮೃತ ಮುತ್ತಂಗಿಕರ, ಉಪಾಧ್ಯಕ್ಷ ಸುಭಾಷ ಲಾಧಾ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಗೌತಮ ಪ್ರಸಾದ್, ಬೀದರ್ ದಕ್ಷಿಣ ಅಧ್ಯಕ್ಷ ರಾಜಕುಮಾರ ಸಿಂಧೆ, ಔರಾದ್ ಘಟಕದ ಅಧ್ಯಕ್ಷ ಸಂತೋಷ ಸಿಂಧೆ, ಕಮಲನಗರ ಘಟಕದ ಅಧ್ಯಕ್ಷ ಉತ್ತಮ ಖೇಡ, ಬೀದರ್ ಘಟಕದ ಅಧ್ಯಕ್ಷ ಅಂಬರೀಷ ಕುದುರೆ ಹಾಗೂ ಪ್ರಮುಖರಾದ ರಾಜಕುಮಾರ ಡೊಂಗ್ರೆ, ಸುನೀಲ ಚಂದಾ, ಅಂಬಾದಾಸ ಚಕ್ರವರ್ತಿ, ರಾಹುಲ ಖಂದಾರೆ, ಸಚಿನ್ ಗಿರಿ, ಶಕ್ತಿಕಾಂತ ಬಾವಿದೊಡ್ಡಿ, ರಜನಿಕಾಂತ ನಾಯಕ, ಸತೀಶ ದೊಡ್ಡಿ, ಶಂಕರ ಫುಲೆ, ಮಹೇಶ ಭೋಲಾ, ದಿಲೀಪ ಚಂದಾ, ಮಲ್ಲಿಕಾರ್ಜುನ ಕಪಲಾಪೂರೆ, ಸುರೇಶ ಜೋಜನಾಕರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.