ಬೀದರ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ ತಿಪ್ಪಣ್ಣ ಸಿರ್ಸಿಗೆ ಮತ್ತು ರವೀಂದ್ರ ರತ್ನಾಕರ್ ಅವರ ಮೇಲೆ ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಎಸಗಿದ ಆರೋಪಗಳಿವೆ. ಆ ಇಬ್ಬರೂ ಅಧಿಕಾರಿಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಕ್ಷಿಸುತ್ತಿದ್ದಾರೆ ಎಂದು ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಗಂಭೀರ ಆರೋಪ ಮಾಡಿದ್ದಾರೆ.
ʼ2023ರ ಜುಲೈ 14ರಂದು ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾಗಿದ್ದ ಅರವಿಂದಕುಮಾರ್ ಅರಳಿ ವಿಧಾನ ಪರಿಷತ್‌ನಲ್ಲಿ ದುರುಪಯೋಗದ ವಿಷಯ ಪ್ರಸ್ತಾಪಿಸಿದ್ದರು. ಆಗ ಹಿರಿಯ ಅಧಿಕಾರಿಗಳ ತಂಡವನ್ನು ವಿಚಾರಣೆಗೆ ರಚಿಸಿದ್ದ ಸರ್ಕಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೂ, ಕ್ರಮವಾಗದ್ದರಿಂದ ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ 2024ರ ಏಪ್ರಿಲ್ 6ರಂದು ವಿಧಾನಸಭೆಯಲ್ಲಿ ಮತ್ತೆ ಈ ವಿಷಯ ಪ್ರಸ್ತಾಪಿಸಿದ್ದರು. ವಿಚಾರಣೆ ನಂತರ ಇಬ್ಬರೂ ಅಧಿಕಾರಿಗಳ ವಿರುದ್ಧ ದೋಷಾರೋಪ ಸಲ್ಲಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಬೆಂಗಳೂರಿನ ವಿಧಾನಸೌಧದಲ್ಲಿ 2025ರ ಮೇ 14ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಅವರು, ಇಬ್ಬರು ಅಧಿಕಾರಿಗಳ ಅಮಾನತು ಕಡತವನ್ನು ಅನುಮೋದನೆಗಾಗಿ ಹೆಬ್ಬಾಳಕರ ಅವರಿಗೆ ಕಳುಹಿಸಿದ್ದಾರೆ. ಆದರೆ, ಈವರೆಗೂ ಸಚಿವರು ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಧಿಕಾರಿಗಳು ಬೇರೆ ಬೇರೆ ಸ್ಥಳಗಳಲ್ಲಿ ಈಗಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆʼ ಎಂದು ಆಪಾದಿಸಿದರು.
ದುರುಪಯೋಗದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ರಕ್ಷಿಸುತ್ತಿರುವುದರಿಂದ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸಿದ್ದರಾಮಯ್ಯ ತಮ್ಮ ಸಂಪುಟದಿಂದ ಕೈಬಿಡಬೇಕು. ಇಲ್ಲಿದಿದ್ದರೆ ವಿಧಾನಸಭೆಗೆ ಮುತ್ತಿಗೆ ಸರ್ಕಾರದ ಭ್ರಷ್ಟಾಚಾರದ ನಡೆಯನ್ನು ರಾಜ್ಯದ ಜನತೆ ಎದುರು ತೆರೆದಿಡಲಾಗುವುದುʼ ಎಂದು ಓಂಪ್ರಕಾಶ ರೊಟ್ಟೆ ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಮಗನ ಸಾವಿನ ಸುದ್ದಿ ಕೇಳಿ ಅಘಾತಗೊಂಡ ತಾಯಿ ಹೃದಯಾಘಾತದಿಂದ ಸಾವು