ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಎಲ್ಲ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ಅನ್ವಯ ಆಹಾರ ಸಾಮಾಗ್ರಿ ವಿತರಿಸುವಂತೆ ಇಲಾಖೆ ಆಯುಕ್ತರ ಆದೇಶವಿದೆ. ಆದರೆ ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಸರ್ಕಾರದ ಆದೇಶ ಪಾಲಿಸದೆ ಮ್ಯಾನುವಲ್ ಹಾಜರಾತಿ ಪಡೆದು ವಿದ್ಯಾರ್ಥಿಗಳಿಗೆ ಆಹಾರ ಸಾಮಾಗ್ರಿ ವಿತರಿಸಿ ಬೋಗಸ್ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡುತ್ತಿದ್ದಾರೆʼ ಎಂದು ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿ ಸಂಸ್ಥಾಪಕ ಗಗನ್ ಫುಲೆ ಆರೋಪಿಸಿದ್ದಾರೆ.
ಮಂಗಳವಾರ ಬೀದರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಹಾಸ್ಟೆಲ್‍ಗಳಲ್ಲಿ ಅಳವಡಿಸಲಾಗಿರುವ ಬಯೋಮೆಟ್ರಿಕ್ ಯಂತ್ರಗಳ ಮೂಲಕ ಒಬ್ಬ ವಿದ್ಯಾರ್ಥಿ ಮೂಲಕವೇ ಐದು ಮಂದಿಯ ಹಾಜರಾತಿ ದಾಖಲು ಮಾಡಲಾಗುತ್ತಿರುವ ಆರೋಪವೂ ಇದೆ. ಹಾಗಾಗಿ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯವಾಗಿ ಜಾರಿಗೊಳಿಸಿದರೆ ಮಾತ್ರ ಅನುದಾನ ದುರ್ಬಳಕೆ ತಡೆಯಬಹುದಾಗಿದೆʼ ಎಂದು ಹೇಳಿದರು.
ʼಹಿಂದಳಿದ ವರ್ಗಗಳ ಇಲಾಖೆಯಡಿ ಬರುವ ಮೆಟ್ರಿಕ್ ಪೂರ್ವ ಹಾಸ್ಟೆಲ್‍ಗಳಲ್ಲಿ ಪ್ರವೇಶ ಪಡೆದ ಪ್ರತಿ ವಿದ್ಯಾರ್ಥಿಗೆ ಮಾಸಿಕ ತಲಾ ₹1,750 ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗೆ ತಲಾ, ₹1,850 ಹಾಗೂ ಊಟ, ಉಪಾಹಾರ ವೆಚ್ಚ ಭರಿಸಲಾಗುತ್ತಿದೆ. 10 ತಿಂಗಳ ಅವಧಿಗೆ ಉಚಿತ ವಸತಿ, ಆಹಾರ, ಸಮವಸ್ತ್ರ ಹಾಗೂ ಇತರೆ ಸೌಲಭ್ಯಗಳಿಗೂ ಹಣ ಒದಗಿಸುತ್ತಿದೆ. ಆದರೆ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಆಧಿಕಾರಿಗಳು 2022ರ ಜುಲೈ 26ರಿಂದ ಮಾರ್ಚ್ 2025ರವರೆಗೆ ಸರ್ಕಾರದ ಆದೇಶ ಪಾಲಿಸದೆ ವಿದ್ಯಾರ್ಥಿಗಳಿಗೆ ಮ್ಯಾನುವಲ್ ಹಾಜರಾತಿ ಪ್ರಕಾರ ಆಹಾರ ವೆಚ್ಚದ ಬಿಲ್ ಪಾವತಿಸುತ್ತಿರುವುದು ಕಂಡು ಬಂದಿದೆʼ ಎಂದು ದೂರಿದರು.
ʼಹಿಂದುಳಿದ ವರ್ಗಗಳ ಇಲಾಖೆ ಆದೇಶಗಳನ್ನು ಗಾಳಿಗೆ ತೂರಿ ಇಲಾಖೆ ಅಧಿಕಾರಿಗಳು ಅಕ್ರಮ ವ್ಯವಹಾರ ಎಸಗಿ ಸರ್ಕಾರದ ಹಣ ದುರ್ಬಳಕೆ ಮಾಡಿದ್ದಾರೆ. ಹೀಗೆ ಜಿಲ್ಲೆಯ ಎಲ್ಲ ತಾಲ್ಲೂಕಿನ ಹಾಸ್ಟೆಲ್‌ಗಳಲ್ಲಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತ್ತಿದೆ. ಕೂಡಲೇ ಈ ಅವ್ಯವಹಾರದಲ್ಲಿ ಶಾಮೀಲಾದ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕುʼ ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೊಲೀಸ್ ಸಿಬ್ಬಂದಿ ಸ್ವಂತ ವಾಹನಗಳ ಮೇಲೆ ‘ಪೊಲೀಸ್’ ಎಂದು ಬರೆಸುವಂತಿಲ್ಲ: ಪರಮೇಶ್ವರ್
ಪ್ರಜಾ ಪ್ರಭುತ್ವ ಸಂರಕ್ಷಣಾ ಸಮಿತಿಯ ಪ್ರಮುಖರಾದ ವೆಂಕಟರಾವ್ ಮೋರೆ, ವಿನೋದ ರತ್ನಾಕರ್, ಜೈವರ್ಧನ್ ಫುಲೆ, ಕಲ್ಲಪ್ಪ ಹಾಲಹಿಪ್ಪರ್ಗಾ ಇದ್ದರು.