‘ಮಾಜಿ ಸಚಿವ, ಔರಾದ್ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಮೂಲದ ಯುವತಿ ಸಂಧ್ಯಾ ರಾಠೋಡ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಯುವತಿ, ಆಕೆಯ ತಾಯಿ ಹಾಗೂ ಸಹೋದರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ʼಶಾಸಕ ಪ್ರಭು ಚವ್ಹಾಣ ಅವರು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಎಲ್ಲ ವಿಡಿಯೋ, ಫೋಟೊಗಳು ವೀಕ್ಷಿಸಿದ್ದೇನೆ. ಒಂದು ಕಡೆ ಮಗಳು ಎನ್ನುವುದು, ಇನ್ನೊಂದು ಕಡೆ ನಾನು ಯಾರದ್ದೋ ಹುಡುಗನ ಜತೆ ಚಾಟ್ ಮಾಡಿದ್ದೇನೆಂದು ಹೇಳುತ್ತಾರೆ. ನನ್ನ ಮೇಲೆ ಮಾಡುತ್ತಿರುವ ಆರೋಪ ನಿರಾಧಾರʼ ಎಂದು ಆರೋಪಿಸಿದರು.
ʼಸ್ವತಃ ಪ್ರತೀಕ್ ಚವ್ಹಾಣ ನನ್ನ ಕಾಲ್ ಹಿಸ್ಟರಿ ಪರಿಶೀಲನೆ ಮಾಡಿದ್ದಾರೆ. ನನ್ನ ಎರಡು ಮೊಬೈಲ್‌ಗಳು ಸುಮಾರು ನಾಲ್ಕು ತಿಂಗಳಿಂದ ಚವ್ಹಾಣ ಕುಟುಂಬಸ್ಥರ ಹತ್ತಿರ ಇವೆ. ಹೀಗಾಗಿ ಅವರೇ ಸೃಷ್ಟಿಸಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಹಾಗೂ ಪ್ರತೀಕ್ ಜತೆ ನಡೆದಿದೆ ಎನ್ನಲಾದ ದೈಹಿಕ ಸಂಪರ್ಕದ ಬಗ್ಗೆ ಈಗಾಗಲೇ ರಾಜ್ಯ ಮಹಿಳಾ ಆಯೋಗ ಮತ್ತು ಪೊಲೀಸ್ ಇಲಾಖೆಗೆ ದಾಖಲೆ ಸಮೇತ ದೂರು ನೀಡಿದ್ದೇನೆ. ಬೇರೆ ಹುಡುಗನ ಜತೆ ನನಗೆ ಅನೈತಿಕ ಸಂಬಂಧ ಇದ್ದರೆ ನಾನೇಕೆ ಪ್ರತೀಕ್ ಮೇಲೆ ದೂರು ನೀಡುತ್ತಿದ್ದೆ? ನಾನೇಕೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದೆ. ಪ್ರತೀಕ್ ನನ್ನ ಹಾಗೆ ಇನ್ನೂ ಬೆರೆ ಹುಡುಗಿಯವರೊಂದಿಗೆ ಸಂಬಂಧ ಹೊಂದಿದ್ದಾರೆ. ಸಾಕ್ಷಿಗಳನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿರುವುದಾಗಿ ಹೇಳಿದರು.
ʼನನ್ನ ಮೇಲೆ ಆಗಿರುವ ಅನ್ಯಾಯ ಸೇರಿ ಇತರೆ ಘಟನೆಗಳ ಕುರಿತು ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಸ್ಥಳೀಯ ಠಾಣಾಧಿಕಾರಿಗಳು ದೂರು ಸ್ವೀಕರಿಸಲಿಲ್ಲ ಎಂದು ಸಂತ್ರಸ್ತೆ ಯುವತಿ ಸಂಧ್ಯಾ ರಾಠೋಡ ಅಸಮಾಧಾನ ಹೊರಹಾಕಿದರು. ಪ್ರಭಾವಿ ಶಾಸಕರ ಒತ್ತಡದಿಂದ ದೂರು ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ನಾವು ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದು, ಮಹಿಳಾ ಆಯೋಗದ ಅಧ್ಯಕ್ಷರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಬಳಿಕ ಇದೀಗ ಬೀದರ್‌ನಲ್ಲಿ ಪ್ರತೀಕ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಈಗ ಜಿಲ್ಲಾ ಪೊಲೀಸರು ಎಲ್ಲ ರೀತಿಯಿಂದ ಸಹಕಾರ ನೀಡುತ್ತಿದ್ದಾರೆʼ ಎಂದು ಹೇಳಿದ್ದಾರೆ.
ʼನನಗೆ ಶಾಸಕ ಪ್ರಭು ಚವ್ಹಾಣ್ ಅವರಿಂದ ಜೀವ ಬೆದರಿಕೆ ಇದೆ. ಕುಟುಂಬದವರು ಮತ್ತು ಅವರ ಕಡೆಯವರು ಯಾವಾಗ ಬೇಕಾದರೂ ಹಲ್ಲೆ ಮಾಡುವ ಸಾಧ್ಯತೆ ಇದೆ ಎಂದು ಸಂತ್ರಸ್ತ ಯುವತಿ ಸಂಧ್ಯಾ ರಾಠೋಡ ತಿಳಿಸಿದರು. ನನಗೆ ಪೊಲೀಸ್ ರಕ್ಷಣೆ ಕೊಡಬೇಕು. ಶಾಸಕ ಚವ್ಹಾಣ ಮತ್ತು ಅವರ ಕುಟುಂಬದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನ ಜೀವಕ್ಕೆ ಬೆದರಿಕೆ ಇದೆ. ಹೀಗಾಗಿ ನಮಗೆ ಪೊಲೀಸರು ಸೂಕ್ತ ರಕ್ಷಣೆ ಕೊಡಬೇಕುʼ ಎಂದು ಯುವತಿ ಕುಟುಂಬಸ್ಥರು ಕೋರಿದರು.
ʼನನಗೆ ಖೂಬಾ ಅವರು ಯಾರೆಂಬುದು ನಮಗೆ ಗೊತ್ತಿಲ್ಲ. ಪ್ರತೀಕ್ ಅವರ ಬಾಯಿಂದಲೇ ಖೂಬಾ ಹೆಸರು ಕೇಳಿದ್ದು, ಖೂಬಾ ಅವರ ಚುನಾವಣೆ ನಂತರ ಮದುವೆ ಮಾಡೋಣ. ಅದಕ್ಕೆ ನರೇಂದ್ರ ಮೋದಿ, ಅಮಿತ್ ಷಾ ಅವರನ್ನು ಕರೆಸೋಣ ಅಂತ ಹೇಳಿದರು. ಅದ್ದೂರಿ ಮದುವೆ ಮಾಡಬೇಕಾಗಿದ್ದು, ಹೀಗಾಗಿ ಮಳೆಗಾಲ ಮುಗಿಯಲಿ ಎಂದರು. ಹೀಗೆ ಒಂದಿಲ್ಲೊಂದು ನೆಪ ಹೇಳಿ ಪ್ರಭು ಚವಾಣ್ ಅವರು ಮಗ ಪ್ರತೀಕ್ ಜೊತೆಗೆ ನಿಶ್ಚಯವಾಗಿದ್ದ ವಿವಾಹವನ್ನು ಮುಂದೂಡುತ್ತಲೇ ಹೋದರುʼ ಎಂದು ಯುವತಿ ವಿವರಿಸಿದರು.
ನಮಗೆ ರಾಜಕೀಯ ಎಂಬುದು ಗೊತ್ತಿಲ್ಲ. ಯಾರದೇ ಪ್ರಚೋದನೆಯಿಂದ ದೂರು ಕೊಟ್ಟಿಲ್ಲ. ನಮಗೆ ಅನ್ಯಾಯವಾಗಿದೆ ಎಂದು ಮಹಿಳಾ ಆಯೋಗಕ್ಕೆ ಹೋಗಿದ್ದೇವೆ. ನಮಗೆ ನ್ಯಾಯ ಸಿಗಬೇಕು. ಪ್ರತೀಕ್ ನನ್ನ ಮೇಲೆ ಎರಡು ಸಲ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು. ಇದಾದ ಬಳಿಕ ನಾನು ಖಿನ್ನತೆಗೆ ಒಳಗಾದೆ. ಅನ್ಯಾಯ ಸಹಿಸಿಕೊಂಡು ಸುಮ್ಮನಿದ್ದರೆ ಆಗುವುದಿಲ್ಲ ಎಂದು ತಿಳಿದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವೆ. ಇದೆಲ್ಲಾ ವಿಷಯಾಂತರ ಮಾಡುವ ಕಾರಣಕ್ಕೆ ಬೇರೊಬ್ಬರ ಹೆಸರು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಶಾಸಕ ಪ್ರಭು ಚವ್ಹಾಣ ಪುತ್ರನಿಂದ ಮೋಸ ಆರೋಪ : ಯುವತಿ ಕುಟುಂಬಸ್ಥರ ವಿರುದ್ಧ ದೂರು ದಾಖಲು
ನನ್ನ ಸಹೋದರಿ ಸಂಧ್ಯಾ ಜತೆ ಘಮಸುಬಾಯಿ ತಾಂಡಾದ ಶಾಸಕ ಪ್ರಭು ಚವ್ಹಾಣ ಅವರ ಪುತ್ರ ಪ್ರತೀಕ್ ಚವ್ಹಾಣ ಜತೆ ನಡೆದಿದ್ದ ನಿಶ್ಚಿತಾರ್ಥ ಇನ್ನೂ ಮುರಿದುಕೊಂಡಿಲ್ಲ. ಶಾಸಕ ಚವ್ಹಾಣ ಅವರು ಸಮಾಜದ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮುರಿದುಕೊಳ್ಳಲಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಒಂದು ವೇಳೆ ನಿಶ್ಚಿತಾರ್ಥ ಕಡಿದುಕೊಂಡರೆ ನನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಏಕೆ ಹಾಕುತ್ತೇವೆ. ಇದು ಶುದ್ಧ ಸುಳ್ಳು ಎಂದು ಯುವತಿ ಸಹೋದರ ರಾಹುಲ್ ರಾಠೋಡ ದೂರಿದ್ದಾರೆ.