ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಕಾರಂಜಾ ಹಿನ್ನೀರಿನ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ. ಅವರ ಸಮಸ್ಯೆ ಬಗೆಹಿರಿಸಲ್ಲ. ಬಜೆಟ್‌ನಲ್ಲಿ ಅವರ ಸಮಸ್ಯೆಗಳ ಕುರಿತು ಉಲ್ಲೇಖವಿಲ್ಲ. ಕಾರಂಜಾ ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿನ ನಡೆಯುತ್ತಿರುವ ವಿಧಾನಸಭೆ ಅಧವೇಶನದಲ್ಲಿ ಬೀದರ್ ಜಿಲ್ಲೆಯ ನಾನಾ ಸಮಸ್ಯೆಗಳ ಕುರಿತು ಅವರು ಮಾತನಾಡಿದರು. “ಕಾಂಗ್ರೆಸ್ ತಮ್ಮ ಗ್ಯಾರಂಟಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದೆ. ಅದು ಸ್ವಾಗತಾರ್ಹ. ಆದರೆ, ಸಾರಿಗೆ ಇಲಾಖೆಯಿಂದ ಯಾವುದೇ ತಯಾರಿ ಆಗದಿರುವ ಕಾರಣ, ವಿಧ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಬಸ್‌ಗಳ ಕೊರತೆಯಿದೆ. ಇರುವ ಬಸ್‌ಗಳ ರೂಟ್ ಕಡಿಮೆ ಮಾಡಲಾಗಿದೆ. ದಿನನಿತ್ಯ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಬಾಗಿಲಿನಲ್ಲಿ ನೇತಾಡುತ್ತ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಹುತ ಸಂಭವಿಸುವ ಮುನ್ನ ಸಾರಿಗೆ ಸಚಿವರು ಪರಿಶೀಲನೆ ನಡೆಸಿ ಬಸ್‌ಗಳನ್ನು ಹೆಚ್ಚಿಸಬೇಕು” ಎಂದರು.
“ಬೀದರ್ ಜಿಲ್ಲೆಯ ಬಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಸುಮಾರು 184 ಎಕರೆಯಲ್ಲಿರುವ ಕಾರ್ಖಾನೆಯು ದಿನನಿತ್ಯ 3 ರಿಂದ 3.5 ಲಕ್ಷ ಕಬ್ಬು ನುರಿಸುವ ಸಾಮರ್ಥ ಹೊಂದಿತ್ತು. ಆದರೆ, ಸ್ಥಗಿತಗೊಂಡಿದೆ. ಲೀಸ್-ಗುತ್ತಿಗೆ ನೀಡುವುದು, ನೀರಾವರಿ ಹೆಚ್ಚಿನ ಆದ್ಯತೆ ಕುರಿತು ಬಜೆಟ್‌ನಲ್ಲಿ ಸೇರಿಸಲಾಗಿಲ್ಲ. ಕಾರಂಜಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರ ಸಮಸ್ಯೆ ಪರಿಹಾರ ಕುರಿತು ಪ್ರಸ್ತಾಪವಿಲ್ಲ. ಹೊಸದಾಗಿ ರಚನೆಯಾದ ತಾಲೂಕಗಳಿಗೆ ಯಾವುದೆ ಸೌಲಭ್ಯ ಕಲ್ಪಿಸಿಲ್ಲ” ಎಂದು ಆರೋಪಿಸಿದ್ದಾರೆ.
“ಬೀದರ್ ಜಿಲ್ಲೆಯಲ್ಲಿದ್ದ ಕೃಷಿ ಡಿಪ್ಲೋಮಾ ಕೋರ್ಸ್‌ಅನ್ನು ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಸ್ಥಗಿತಗೊಳಿಸಲಾಗಿದೆ. ಬೀದರ್‌ನಲ್ಲಿರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಪದವಿ ಕಾಲೇಜು ಕಟ್ಟಡ ನಿರ್ಮಾಣ ಮಾಡಿ ನಾಲ್ಕು ವರ್ಷವಾಯಿತು. ಆದರೆ, ಅದಕ್ಕೆ ಸೂಕ್ತ ಸೌಲಭ್ಯ ಇನ್ನೂ ದೊರೆಯುತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.