ಹವಾಮಾನ ಬದಲಾವಣೆಯಿಂದಾಗಿ ಮಳೆಯ ಕಾಲಮಾನವೇ ಬದಲಾಗಿದೆ. ಜೂನ್ ಅರಂಭದಲ್ಲಿಯೇ ರಾಜ್ಯವನ್ನು ಪ್ರವೇಶಿಸಬೇಕಿದ್ದ ನೈರುತ್ಯ ಮಾರುತಗಳ ಸುಳಿವಿಲ್ಲ. ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿದ್ದ ರೈತರು ಕಂಗಾಲಾಗಿದ್ದಾರೆ. ಮುಂಗಾರು ಹಂಗಾಮಿನ ಉದ್ದು, ಹೆಸರು, ಸೋಯಾಬೀನ್, ಹತ್ತಿ ಬಿತ್ತನೆ ಕಾರ್ಯ ನಡೆಯದೇ ಇರುವುದರಿಂದ ರೈತರಲ್ಲಿ ಆತಂಕ ಮೂಡಿದೆ.
ಬೀದರ್ ಜಿಲ್ಲಾದ್ಯಂತ ಜೂನ್ 1 ರಿಂದ 14ರವರೆಗೆ ಕೇವಲ 31-32 ಮೀ.ಮಿ. ಮಳೆಯಾಗಿದೆ. ಇದರಿಂದ ಹೆಸರು, ಉದ್ದು, ತೊಗರಿ ಬಿತ್ತನೆಗೆ ಬಿತ್ತನೆ ಬೀಜ ಖರೀದಿಸಿದ್ದ ರೈತರು, ಬಿತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಇತರ ಬೆಳೆಗಳನ್ನು ಬೆಳೆಯಲು ಚಿಂತಿಸುತ್ತಿದ್ದಾರೆ. ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆಯಾದರೆ ಮಾತ್ರ ಎಲ್ಲ ಬೆಳೆಗಳು ಹೆಚ್ಚಿನ ಇಳುವರಿ ಬರಲು ಸಾಧ್ಯ, ಬಿತ್ತನೆಗೆ ತಡವಾದರೆ ಬೆಳೆಗಳಲ್ಲಿ ಗುಣಮಟ್ಟ ಕುಸಿಯುತ್ತದೆ ಎಂದು ರೈತರು ಹೇಳಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಕೃಷಿ ಭೂಮಿಯ ಅರ್ಧದಷ್ಟು ಭಾಗ ಸೋಯಾಬೀನ್ ಬೆಳೆದರೆ, ಉಳಿದ ಅರ್ಧಭಾಗ ಅನ್ಯ ಬೆಳೆ ಬೆಳೆಯುವ ಗುರಿ ಹೊಂದಿದ್ದಾರೆ.
ಕಳೆದ ವರ್ಷವೂ ಬಿತ್ತನೆ ಕಾರ್ಯಕ್ಕೆ ವಿಳಂಬವಾಗಿತ್ತು. ಈ ಸಲವೂ ಮೃಗಶಿರಾ ಮಳೆ ತಡವಾದ ಕಾರಣಕ್ಕೆ ಭೂಮಿಯಲ್ಲಿ ತೇವಾಂಶ ಇಲ್ಲ. ಎಪ್ರಿಲ್, ಮೇ ತಿಂಗಳಲ್ಲಿ ಆಗಾಗ ಮಳೆಯಾಗಿತ್ತು. ಈಗ ಮಳೆ ಕೈಕೊಟ್ಟಿದೆ. ಉದ್ದು, ಹೆಸರು ಬಿತ್ತನೆ ಮಾಡಿದರೂ ನಿರೀಕ್ಷಿತ ಇಳುವರಿ ಬರುವುದಿಲ್ಲ. ಹವಾಮಾನ ಏರುಪೇರಾದರೂ ಹೊಂದಿಕೊಳ್ಳುವ ಸೋಯಾಬೀನ್ ಬೆಳೆ ಬೆಳೆಯುವುದು ಸೂಕ್ತ. ಹೊಲ ಹದ ಮಾಡಲಾಗಿದೆ, ಬೀಜ ಗೊಬ್ಬರ ದಾಸ್ತಾನು ಖರೀದಿಸಿ ಬಿತ್ತನೆ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳು ಮುಗಿದಿವೆ. ಮಳೆಗಾಗಿ ಕಾಯ್ತಾ ಇದ್ದೇವೆ ಎನ್ನುತ್ತಾರೆ ಜನವಾಡ ಗ್ರಾಮದ ರೈತ ಬಸಪ್ಪ ಗುಮ್ಮೆ.
ಬೀದರ್ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಬಸವರಾಜ ಬಿರಾದಾರ ಈದಿನ.ಕಾಮ್ ಜೊತೆ ಮಾತನಾಡಿ, “ಮುಂಗಾರು ಮಳೆ ವಿಳಂಬಕ್ಕೆ ಕಾರಣವಾದ ಸೈಕ್ಲೋನ್ ಜೂನ್ 15 ರಂದು ಅಂತ್ಯವಾಗಿದೆ. ಆದರೂ ಇನ್ನೊಂದು ವಾರ ಮಳೆ ಆಗಲ್ಲ. ಜೂನ್ 21 ನಂತರ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ವಾಡಿಕೆಯಂತೆ ಬಿತ್ತನೆಗೆ 120 ಮಿ.ಮಿ. ಮಳೆಯ ಅಗತ್ಯವಿದೆ. ಆದರೆ 31-32 ಮಿ.ಮಿ. ಮಾತ್ರ ಮಳೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಕೃಷಿ ಹೊಂಡಗಳು ನಿರ್ಮಿಸಿಕೊಂಡರೆ ಬಿತ್ತನೆ ಕಾರ್ಯಕ್ಕೆ ಅನುಕೂಲ ಆಗುತ್ತದೆ” ಎಂದು ಹೇಳಿದ್ದಾರೆ.