ಬೀದರ್ ನಗರ ಹೊರವಲಯದ ಚಿಕ್ಕಪೇಟೆ–ಅಲಿಯಾಬಾದ್ ರಿಂಗ್‌ರೋಡ್‌ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಗ್ರಾಮ ಪಂಚಾಯಿತಿ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೃತ್ಯ ಎಸಗಿದ ಇಬ್ಬರು ಹಾಗೂ ಕೊಲೆಗೆ ಸಹಕರಿಸಿದ ಇಬ್ಬರು ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಘಟನೆ ನಡೆದ ಏಳು ಗಂಟೆಗಳಲ್ಲಿ ನಗರದ ಶಹಾಪುರ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ.
‘ಬೀದರ್ ನಗರದ ನಾವದಗೇರಿ ಹಾಗೂ ಕುಂಬಾರವಾಡ ಬಡಾವಣೆಯ ಜಾನ್ ಮತ್ತು ಉಮೇಶ ಎಂಬುವವರು ಕೊಲೆ ಆರೋಪಿಗಳಾಗಿದ್ದು, ಕೃತ್ಯಕ್ಕೆ ಸಹಕರಿಸಿದ ಇನ್ನುಳಿದ ಇಬ್ಬರು ಆರೋಪಿಗಳು ತಾಲ್ಲೂಕಿನ ಹೊನ್ನಿಕೇರಿ ಗ್ರಾಮದವರು. ಕೊಲೆಗೆ ಸಂಚು ರೂಪಿಸಿದ ಹೊನ್ನಿಕೇರಿ ಗ್ರಾಮದ ಮುಖ್ಯ ಆರೋಪಿ ಪರಾರಿಯಾಗಿದ್ದಾನೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕೊಲೆಗೆ ಕಾರಣವೇನು ?
ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ವೈಜಿನಾಥ ದತ್ತಾತ್ರಿ (49) ಎಂಬುವರು ಗ್ರಾಮ ಪಂಚಾಯಿತಿ ಸದಸ್ಯ, ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರು. ಜನವಾಡ ಪೊಲೀಸ್ ಠಾಣೆಯಲ್ಲಿ ಹಿಂದಿನ ವರ್ಷ ಅವರದೇ ಗ್ರಾಮದಲ್ಲಿ ನಡೆದ ಪೋಕ್ಸೋ ಪ್ರಕರಣ ಹಾಗೂ ಎಸ್ಸಿ,ಎಸ್ಟಿ ದೌರ್ಜನ್ಯ ಪ್ರಕರಣವೊಂದು ದಾಖಲಾಗಿತ್ತು. ವೈಜಿನಾಥ ಅವರು ಈ ಪ್ರಕರಣದಲ್ಲಿ ನೊಂದ ಕುಟುಂಬದ ಪರ ನಿಂತು, ಅವರಿಗೆ ವೈಜಿನಾಥ ಅಗತ್ಯ ಸಹಕಾರ ನೀಡಿದ್ದರು. ಈ ಕಾರಣಕ್ಕೆ ವೈಜಿನಾಥ ಅವರ ದೂರದ ಸಂಬಂಧಿಕರಾದ ವ್ಯಕ್ತಿ ಸೇಡಿನಿಂದ ಕೊಲೆಗೆ ಸಂಚು ರೂಪಿಸಿದ್ದನು. ಕೊಲೆಗೆ ಸಂಚು ರೂಪಿಸಿದ ವ್ಯಕ್ತಿ ಸ್ನೇಹಿತರಾಗಿರುವ ಕಾರಣಕ್ಕೆ ವೈಜಿನಾಥ ಅವರನ್ನು ಕೊಲೆ ಮಾಡಲಾಗಿದೆ ಎಂದು ಕೊಲೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.
ʼವೈಜಿನಾಥ ಅವರು ಶುಕ್ರವಾರ ಚಿಕ್ಕಪೇಟೆ–ಅಲಿಯಾಬಾದ್ ರಿಂಗ್‌ರೋಡ್ ಸಮೀಪದ ಎಸ್‌ಕೆ ಧಾಬಾದಲ್ಲಿ ಊಟ ಮಾಡಲು ಹೋಗಿದ್ದರು. ಈ ವೇಳೆ ವೈಜಿನಾಥ ಅವರನ್ನು ಇಬ್ಬರು ಆರೋಪಿಗಳು ಮಚ್ಚಿನಿಂದ ಹೊಡೆದು, ಕೊಲೆ ಮಾಡಿ ಬೈಕ್ ಮೇಲೆ ಪರಾರಿಯಾಗಿದ್ದರು. ಈ ಪ್ರಕರಣದ ಓರ್ವ ಆರೋಪಿಯು ಏಳೆಂಟು ವರ್ಷದ ಹಿಂದೆ ನ್ಯೂಟನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದನುʼ ಎಂದು ಹೇಳಿದರು.
ʼಸ್ಥಳೀಯ ಸಿಸಿಟಿವಿ ಸಹಾಯದಿಂದ ಕಮಾಂಡ್ ಸೆಂಟರ್ ಮೂಲಕ ಇಬ್ಬರು ಆರೋಪಿಗಳ ಗುರುತು ಪತ್ತೆ ಹಚ್ಚಲಾಯಿತು. ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಂಚು ರೂಪಿಸಿದ ಮುಖ್ಯ ಆರೋಪಿ ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದುʼ ಎಂದು ತಿಳಿಸಿದ್ದಾರೆ.
ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಎಸ್.ಎನ್ ಸನಾದಿ ನೇತೃತ್ವದಲ್ಲಿ ನೂತನ ನಗರ ಠಾಣೆಯ ಪಿಐ ವಿಜಯಕುಮಾರ ಬಾವಗಿ, ಪಿಎಸ್‌ಐಗಳಾದ ಪ್ರಭಾಕರ ಪಾಟೀಲ, ಸೈಯದ್ ಪಟೇಲ, ಅಬ್ದುಲ್ ಸಮದ್, ಹುಲ್ಲೆಪ್ಪಾ, ಕಾನ್‌ಸ್ಟೆಬಲ್‌ಗಳಾದ ರಾಹುಲ್, ಪ್ರಕಾಶ, ಸತೀಶ, ನವೀನ್, ಗಂಗಾಧರ ಅವರನ್ನು ಒಳಗೊಂಡ ತಂಡವು ಪ್ರಕರಣವನ್ನು ಶೀಘ್ರದಲ್ಲಿ ಭೇದಿಸಿ ಉತ್ತಮ ಕೆಲಸ ಮಾಡಿದೆ ಎಂದು ಎಸ್ಪಿ ಪ್ರದೀಪ ಗುಂಟಿ ಅವರು ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಎಸ್.ಎನ್ ಸನಾದಿ, ನೂತನ ನಗರ ಠಾಣೆಯ ಪಿಐ ವಿಜಯಕುಮಾರ ಬಾವಗಿ ಹಾಜರಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನಿಂತಿದ್ದ ಲಾರಿಗೆ ಬಸ್ ಡಿಕ್ಕಿ; ಬೆಳ್ಳಂಬೆಳಗ್ಗೆಯೇ ಐವರ ದುರ್ಮರಣ
ಈ ಕುರಿತು ನೂತನ ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 103(1), 61(2)(ಎ), 3(5)ರ ಅಡಿ ಪ್ರಕರಣ ದಾಖಲಾಗಿದೆ.