ನಾಡಿನ ರಾಜಧಾನಿ ಬೆಂಗಳೂರಿನ ಶಿಲ್ಪಿ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಕೆಂಪೇಗೌಡರವರಂತಹ ಧೀಮಂತ ವ್ಯಕ್ತಿಗಳ, ಸಮರ್ಥ ಆಡಳಿತಗಾರರ ಅವಶ್ಯಕತೆಯಿದೆ ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ನುಡಿದರು.
ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
‘ಬೆಂಗಳೂರಿನ ರಚನಾ ವಿನ್ಯಾಸವನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ನಾಡ ರಕ್ಷಣೆಗಾಗಿಯೇ ಕಂಕಣಬದ್ಧರಾಗಿದ್ದ ಕುಟುಂಬದ ಕುಡಿಯಾಗಿದ್ದ ಕೆಂಪೇಗೌಡರಿಗೆ ವೀರ-ಶೂರ, ನಾಯಕತ್ವದ ಸಂಸ್ಕೃತಿ ರಕ್ತಗತವಾಗಿಯೇ ಬಂದಂತಿದೆ. ಹೀಗಾಗಿಯೇ ಅವರ ಆಡಳಿತ, ಕಾರ್ಯಗಳು ಅಜರಾಮರವಾಗಿವೆ’ ಎಂದರು.
ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ ಮಾತನಾಡಿ, ‘ಬೆಂಗಳೂರಿನ ಆಕರ್ಷಣೆ ಹಾಗೂ ಖ್ಯಾತಿಯಲ್ಲಿ ನಾಡಪ್ರಭು ಕೆಂಪೇಗೌಡರ ಪಾತ್ರ ಮಹತ್ವದ್ದಾಗಿದೆ. ಅತ್ಯಂತ ಸುಂದರ, ಯೋಜನಾಬದ್ಧ ನಗರದ ಕಲ್ಪನೆಯ ಕನಸುಗಾರರಾಗಿದ್ದ ಕೆಂಪೇಗೌಡರು ಜಗತ್ತು ಬೆರಗುಗೊಳ್ಳುವಂತೆ ಅಭಿವೃದ್ಧಿಯ ಕಾರ್ಯ ಕೈಗೊಂಡವರು’ ಎಂದು ಹೇಳಿದರು.
‘ಇಂದು ಜಗತ್ತಿನ ‘ಸಿಲಿಕಾನ್ ಸಿಟಿ’ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ಅತ್ಯಂತ ಸ್ವಚ್ಛ, ಸುಂದರ ಹಾಗೂ ಹಚ್ಚಹಸಿರಿನಿಂದ ನಗರವನ್ನು ತಂಪು ಹವಾಗುಣ ಉಳಿಸಿಕೊಳ್ಳುವಂತೆ ಮಾಡಿದೆ. ಇಂತಹ ಭವ್ಯ ಬೆಂಗಳೂರಿನ ಶಿಲ್ಪಿ ಕೆಂಪೇಗೌಡರಾಗಿದ್ದರು’ ಎಂದರು.
ಇದನ್ನೂ ಓದಿ : ಜೂನ್ 30ರಂದು ಬೀದರ್‌ನಲ್ಲಿ ʼಸದ್ಭಾವನಾ ನಡಿಗೆʼ
ಬೀದರ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.