ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳಾಗಲಿ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳದಿರುವುರಿಂದ ಬೇಸತ್ತು ಬೀದರ್ ಜಿಲ್ಲೆ ಹುಲಸೂರು ವಾರ್ಡ್ ನಿವಾಸಿಗಳು ತಾವೇ ಸ್ವಚ್ಛತೆಗೆ ಮುಂದಾಗಿದ್ದಾರೆ.
ಹುಲಸೂರು ತಾಲೂಕು ಕ್ಷೇತ್ರ ಇನ್ನೂ ಗ್ರಾಮ ಪಂಚಾಯಿತಿ ಆಡಳಿತ ಕೇಂದ್ರವಾಗಿದೆ. ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಇದೇ ಅವ್ಯವಸ್ಥೆ ಇದ್ದು, ಪಂಚಾಯತ್ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನವಿಗೆ ಕ್ಯಾರೇ ಎನ್ನದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಲ್ಕನೇ ವಾರ್ಡ್ ನಿವಾಸಿಗಳು ತಾವೇ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು.
ಈ ದಿನ.ಕಾಮ್‌ನೊಂದಿಗೆ ಸ್ಥಳೀಯ ನಿವಾಸಿಗಳು ಮಾತನಾಡಿ, “ಚುನಾವಣೆ ಸಂದರ್ಭದಲ್ಲಿ ಬೆಟ್ಟದಷ್ಟು ಆಶ್ವಾಸನೆ ನೀಡಿ ಗೆಲ್ಲುತ್ತಾರೆ. ನಂತರ ಮೂಲ ಸೌಕರ್ಯ ಒದಗಿಸಲೂ ತಾತ್ಸಾರ ತೋರುತ್ತಾರೆ. ಕಳೆದ ಕೆಲ ತಿಂಗಳಿಂದ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮೊದಲೇ ಮಳೆಗಾಲ ಚರಂಡಿ ಇನ್ನಷ್ಟು ತುಂಬಿ ಗಬ್ಬು ನಾರುತ್ತಿದೆ. ಹೀಗಾಗಿ ಸ್ಥಳೀಯ ಯುವಕರು, ಹಿರಿಯರು ಸೇರಿ ಚರಂಡಿ ಸ್ವಚ್ಛಗೊಳಿಸಿದ್ದೇವೆ” ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಠಿಣ ಕ್ರಮಕ್ಕೆ ಆಗ್ರಹ
ವಾರ್ಡ್ ನಿವಾಸಿ ದತ್ತಾ ಮೋರೆ ಈ ದಿನ.ಕಾಮ್ ಜೊತೆ ಮಾತನಾಡಿ “ವಾರ್ಡ್ ಚರಂಡಿ ತ್ಯಾಜ್ಯದಿಂದ ಗಬ್ಬುನಾರುತ್ತಿದ್ದು, ದುರ್ವಾಸನೆಯಿಂದ ನಿತ್ಯ ಮೂಗುಮುಚ್ಚಿ ಓಡಾಡುವಂತಾಗಿತ್ತು. ರಸ್ತೆ ಆಸುಪಾಸು ಆಳೆತ್ತರದ ಗಿಡ-ಗಂಟಿ ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿಲ್ಲ. ಹೀಗಾಗಿ ಓಣಿಯ ನಿವಾಸಿಗಳೇ ಮುಂದಾಗಿ ಸ್ವಚ್ಛಗೊಳಿಸಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.