ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ದುಬಲಗುಂಡಿ ಗ್ರಾಮದ ನಾಗಮ್ಮ ನರಸಪ್ಪ (63) ಮೃತರು. ನಾಗಮ್ಮ ಅನಾರೋಗ್ಯದ ಹಿನ್ನಲೆ ಭಾನುವಾರ ಬೆಳಗ್ಗೆ ಆರೋಗ್ಯ ಕೇಂದ್ರಕ್ಕೆ ಬಂದ ವೇಳೆ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿಗಳು ಇಲ್ಲದೇ ಸೂಕ್ತ ಸಮಯಕ್ಕೆ ಚಿಕಿತ್ಸೆಗಾಗಿ ಪರದಾಡಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಮುಖಂಡರು, ಯುವಕರು ಆಸ್ಪತ್ರೆ ಮುಂಭಾಗದಲ್ಲಿ ಜಮಾಯಿಸಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆದುಕೊಂಡಿದ್ದಾರೆ. ವಿಷಯ ತಿಳಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ ಹಾಗೂ ಟಿಎಚ್‍ಒ ಶಿವಕುಮಾರ ಸಿದ್ದೇಶ್ವರ ಆರೋಗ್ಯ ಕೇಂದ್ರಕ್ಕೆ ಧಾವಿಸಿ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಘಟನೆಯ ಮಾಹಿತಿ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ನಾಗರಾಜ ಭೋಜಗುಂಡಿ, ಗ್ರಾಪಂ ಸದಸ್ಯರಾದ ಪ್ರಭು ನೆಳಗಿ, ಸತೀಷ ಪಾಂಡುರಂಗ ಇಮ್ಲೇಕರ್, ರಾಮಣ್ಣ ನರಸಗೊಂಡಿ, ದತ್ತು ಧಗೆ, ಭೀಮಶಾ ಹುಣಸಗೇರಾ, ಜೈರಾಮ ಖಜುರೆ, ಗ್ರಾಪಂ ಸದಸ್ಯ ಅನಿಲ ಪಸಾರ್ಗಿ ಸೇರಿದಂತೆ ಪ್ರಮುಖರಾದ ಭದ್ರೇಶ ಪಾಟೀಲ್, ಶಿವರಾಜ ಗಂಗಶಟ್ಟಿ, ಅಶೋಕಕುಮಾರ ಚಳಕಾಪೂರೆ, ಅಮರ ಪಸಾರ್ಗಿ, ವೀರೇಶ ಸಜ್ಜನ ಹಾಗೂ ಅನೇಕರಿದ್ದರು.
ʼಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನಚ್ಚರಿಕೆಯಾಗಿ ಎಲ್ಲ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದುʼ ಎಂದು ಡಿಎಚ್‌ಒ ಡಾ.ಜ್ಞಾನೇಶ್ವರ ನಿರಗೂಡೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಎಸ್‌ಸಿ/ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದಿಂದ ದತ್ತಿ ಮತ್ತು ಸಂಘದ ಗೌರವ ಪ್ರಶಸ್ತಿ ಪ್ರಕಟ
ʼದುಬಲಗುಂಡಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೆಲ ತಿಂಗಳಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದೇ ಕೆಲ ಸಿಬ್ಬಂದಿಗಳು ಕಾಲ ಹರಣ ಮಾಡುತ್ತಿದ್ದಾರೆ. ಈ ಆರೋಪದ ಮಧ್ಯೆ ಮಹಿಳೆ ಮೃತಪಟ್ಟ ಘಟನೆ ಜರುಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕುʼ ಎಂದು ಗ್ರಾಮಸ್ಥರು ಹೇಳಿದರು.