ಪಾಕಿಸ್ತಾನ ನೆಲದಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಯಶಸ್ವಿಯಾಗಿ ನಿರ್ದಿಷ್ಟ ಗುರಿ ದಾಳಿ ನಡೆಸಿರುವ ವಾಯುಪಡೆ ಸೇರಿದಂತೆ ಭಾರತೀಯ ಸೇನಾ, ನೌಕಾಪಡೆಗಳಿಗೆ ಅರಣ್ಯ, ಜೀವಿಶಾಸ್ತ್ರ ತತ್ವಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿನಂದನೆ ಸಲ್ಲಿಸಿದ್ದಾರೆ.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ 9 ಭಯೋತ್ಪಾದಕ ತಾಣಗಳನ್ನು ನೆಲಸಮ ಮಾಡುವಲ್ಲಿ ಅಪರಿಮಿತ ದಕ್ಷತೆ, ಸಾಮರ್ಥ್ಯ ಮೆರೆದಿರುವ ಭಾರತೀಯ ಸೇನೆ ದೇಶದ ಜನರ ವಿಶ್ವಾಸವನ್ನು ನೂರ್ಮಡಿ ಮಾಡಿದೆ. ಮೂರೂ ಪಡೆಗಳಿಗೆ ಸಂಪೂರ್ಣ ಬೆಂಬಲ ಮತ್ತು ಕಾರ್ಯತಂತ್ರ ರೂಪಿಸಿದ ತಜ್ಞರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತದತ್ತ ಕೆಟ್ಟದೃಷ್ಟಿಬೀರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. ದೇಶದ, ಅಖಂಡತೆ, ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ, ಭಾರತೀಯ ಮುಗ್ಧ ಪ್ರಜೆಗಳಿಗೆ ಹಾನಿಯಾದಾಗ ಭಾರತ ತಕ್ಕ ಉತ್ತರ ನೀಡುತ್ತದೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಸಂದರ್ಭದಲ್ಲಿ ಭಾರತೀಯರೆಲ್ಲರೂ ನಮ್ಮ ಪಡೆಗಳೊಂದಿಗೆ ನಿಲ್ಲುತ್ತಾರೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.