ಬೀದರ್ ತಾಲೂಕಿನ ಯರನಳ್ಳಿ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದ್ದರಿಂದ ಕಳೆದ ಮೂರು ವರ್ಷಗಳಿಂದ ಗ್ರಾಮದ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ. ಮೂಲ ಸೌಲಭ್ಯಗಳಿಲ್ಲದೇ ಅಲ್ಲಿನ ಸಿಬ್ಬಂದಿ ಪರದಾಡುವಂತಾಗಿದೆ.
ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಶಿಥಿಲಾವಸ್ಥೆಗೆ ತಲುಪಿದ ಗ್ರಾಮ ಪಂಚಾಯಿತಿಯ ಹಳೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಅನುದಾನ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಟ್ಟಡ ಭಾಗ್ಯ ಸಿಗದಿರುವುದರಿಂದ ಗ್ರಾಮದ ಹೊರವಲಯದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪಂಚಾಯಿತಿಯ ಕೆಲಸ ಕಾರ್ಯಗಳು ನಡೆಯುತ್ತಿವೆ.
ಯರನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯರನಳ್ಳಿ, ಇಸ್ಲಾಂಪುರ, ಬಂಪಳ್ಳಿ, ಸಾಂಗ್ವಿ ಹಾಗೂ ಸಿದ್ಧಾಪುರ ಗ್ರಾಮಗಳು ಬರುತ್ತವೆ. ಒಟ್ಟು 14 ಸದಸ್ಯರಿರುವ ಇಲ್ಲಿ 7 ಜನ ಮಹಿಳಾ ಸದಸ್ಯೆಯರಿದ್ದಾರೆ. ಜೊತೆಗೆ ಪಿಡಿಒ, ಸಿಬ್ಬಂದಿ ಇದ್ದಾರೆ. ಗ್ರಾಮದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಗೆ ತೆರಳಲು ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.
ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರದಲ್ಲಿ ಮೂರು ಕಿರಿದಾದ ಕೋಣೆಗಳಿವೆ. ಅವುಗಳಲ್ಲೇ ಸಾಮಾನ್ಯ ಸಭೆ, ಪಂಚಾಯಿತಿಯ ದಾಖಲೆ, ಸಾಮಾಗ್ರಿಗಳು ಶೇಖರಣೆ ಮಾಡಲಾಗಿದೆ. ಇಂತಹ ಇಕ್ಕಟ್ಟಿನ ಕೋಣೆಗಳಲ್ಲಿ ಪಂಚಾಯಿತಿಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
ಅತ್ತ ಕಟ್ಟಡ ಕಾಮಗಾರಿ ಆರಂಭವಾಗದೆ ಇತ್ತ ಮೂಲ ಸೌಲಭ್ಯವಿಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಪರದಾಡುತ್ತಿದ್ದಾರೆ. ಸೂರಿಲ್ಲದವರಿಗೆ ಸೂರು ನಿರ್ಮಿಸಿಕೊಡುವಂತೆ ಜಾಗೃತಿ ಮೂಡಿಸುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಸಿಬ್ಬಂದಿ ತಮಗೇ ಸ್ವಂತ ಕಚೇರಿ ಇಲ್ಲದಿರುವುದು ಗ್ರಾಮಸ್ಥರು ನಗುವಂತೆ ಮಾಡಿರುವುದು ವಾಸ್ತವ.
ʼಗ್ರಾಮದ ಹೃದಯಭಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಇತ್ತು. ಸಂಪೂರ್ಣ ಶಿಥಿಲಗೊಂಡ ಕಾರಣ ನೆಲಸಮಗೊಳಿಸಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಆರೋಗ್ಯ ಕೇಂದ್ರದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ನೂತನ ಗ್ರಾಮ ಪಂಚಾಯಿತಿ ಕಚೇರಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ. ಮನರೇಗಾ ಸೇರಿದಂತೆ ಇತರೆ ಅನುದಾನದಲ್ಲಿ ಹೊಸ ಕಚೇರಿ ನಿರ್ಮಾಣವಾದರೆ ಅನುಕೂಲ ಆಗುತ್ತದೆʼ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಸಿನಾ ಬೇಗಂ ಅಬ್ಬಾಸ್ ಖಾನ್ ಹೇಳುತ್ತಾರೆ.
ಪಿಡಿಒ ಪ್ರಿಯಾದರ್ಶನಿ ʼಈದಿನʼ ಜೊತೆಗೆ ಮಾತನಾಡಿ, ʼಗ್ರಾಮ ಪಂಚಾಯಿತಿ ಕಚೇರಿ ಸದ್ಯ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡ ನೆಲಸಮ ಮಾಡಲಾಗಿದೆ. ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು, ಶೀಘ್ರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದುʼ ಎಂದು ತಿಳಿಸಿದರು.
ʼಯರನಳ್ಳಿ ಗ್ರಾಮ ಪಂಚಾಯತ್ ಹೊಸ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿ ಕಳೆದ ಜೂನ್ ತಿಂಗಳಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ನೆಲಸಮಗೊಳಿಸಿದ ಪಂಚಾಯಿತಿ ಕಟ್ಟಡದ ಜಾಗದಲ್ಲಿಯೇ ಹೊಸ ಕಟ್ಟಡ ಕಾಮಗಾರಿ ಆರಂಭಿಸಿದರೆ ಗ್ರಾಮಸ್ಥರಿಗೆ ಅನುಕೂಲ ಆಗುತ್ತದೆʼ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ತಿಳಿಸಿದ್ದಾರೆ.
ಇದನ್ನೂ ಓದಿ : ‘ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಹೈಕ ಜನರ ಜೀವನ ನರಕ’
ಗ್ರಾಮದ ಯುವಕ ಸಿದ್ಧಪ್ಪ ಮಾತನಾಡಿ, ʼಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಇರುವುದರಿಂದ ಸಾರ್ವಜನಿಕರಿಗೆ ಕರ ಪಾವತಿ, ಮನರೇಗಾ ಜಾಬ್ ಕಾರ್ಡ್, ಸೇರಿದಂತೆ ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗುತ್ತಿದೆ. ಸ್ವಂತ ಕಟ್ಟಡ ಸಮಸ್ಯೆಯಿಂದ ಡಿಜಿಟಲ್ ಗ್ರಂಥಾಲಯ ಇಲ್ಲದಿರುವುದು ಬೇಸರದ ಸಂಗತಿ. ಹೊಸ ಕಟ್ಟಡ ನಿರ್ಮಿಸಿದರೆ ಗ್ರಾಮಸ್ಥರಿಗೆ ಎಲ್ಲ ರೀತಿಯಿಂದ ಅನುಕೂಲ ಆಗುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.