ಬಸವಾದಿ ಶರಣರು ತಮ್ಮ ಅನುಭಾವದಿಂದ ಮನಸ್ಸಿನ ಮೈಲಿಗೆಯನ್ನು ತೊಳೆಯುವ ಕೆಲಸ ಮಾಡಿದರು. ಶರಣರು ಅರ್ಚನೆ, ಅರ್ಪಣೆ, ಅನುಭಾವಕ್ಕೆ ಬಹಳ ಮಹತ್ವ ನೀಡಿದರು. ನಾವು ಪ್ರತಿನಿತ್ಯ ಅರ್ಚನೆ, ಅರ್ಪಣೆ ಅನುಭಾವ ಮಾಡಿದರೆ ನಮ್ಮ ಮನಸ್ಸಿನಲ್ಲಿರುವ ವಿಕಾರಗಳನ್ನು ನಾಶವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ 311ನೆಯ ಮಾಸಿಕ ಶರಣ ಸಂಗಮ ಮತ್ತು ಡಾ.ಜಿ.ಬಿ.ವಿಸಾಜಿ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ʼಕಷ್ಟ, ದುಃಖ, ಯಾತನೆಗಳು ದೂರವಾಗುತ್ತವೆ. ಅದಕ್ಕಾಗಿ ಶರಣರು ಅಯ್ಯ ನಿಮ್ಮ ಅನುಭಾವದಿಂದ ಎನ್ನ ತನು, ಮನ, ಭಾವ ಹಾಳಾಯಿತ್ತು ಎಂದು ಹೇಳುತ್ತಾರೆ. ಹಾಳಾಯಿತ್ತು ಎಂದರೆ ತನು, ಮನ, ಭಾವದಲ್ಲಿದ್ದ ವಿಕಾರಗಳನ್ನು ನಾಶವಾದವು ಎಂದು ಅರ್ಥವಾಗುತ್ತದೆ. ಬಸವಣ್ಣನವರು ಸ್ಥಾಪಿಸಿದ
ಅನುಭವ ಮಂಟಪದಲ್ಲಿ ದೇಶ ವಿದೇಶದಿಂದ ಅನೇಕ ರಾಜ ಮಹಾರಾಜರು ಕಲ್ಯಾಣಕ್ಕಾಗಿ ಆಗಮಿಸಿದರು. ಅವರು ನಿಜವಾದ ಸುಖವನ್ನು ಅನುಭವಿಸಲು ಕಲ್ಯಾಣಕ್ಕೆ ಬಂದಿದ್ದರುʼ ಎಂದರು.
ʼಮನಸ್ಸಿನ ಸಮಾಧಾನವೇ ನಿಜವಾದ ಶ್ರೀಮಂತಿಕೆ, ನಿಜವಾದ ಸುಖವಾಗಿರುತ್ತದೆ. ಅದಕ್ಕಾಗಿ ಅಕ್ಕಮಹಾದೇವಿ ಹೇಳುವ ಹಾಗೆ ʼಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕುʼ ಎಂಬ ಮಾತನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆʼ ಎಂದು ತಿಳಿಸಿದರು.
ಸಂತಪೂರ ಜ್ಞಾನದಾಸೋಹ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಗುರುನಾಥ ದೇಶಮುಖ ಕಾರ್ಯಕ್ರಮ ಉದ್ಘಾಟಿಸಿದರು. ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಮೇಲ್ವಚಾರಕ ಶಿವಾನಂದ ಕತ್ತೆ ಗ್ರಂಥ ಪಠಿಸಿದರು.
ಪ್ರತಿಭಾ ಪುರಸ್ಕಾರ, ಸನ್ಮಾನ :
ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಂತಪೂರ ಜ್ಞಾನಭಾರತಿ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರ ಆದರ್ಶ ವಿಠಲರಾವ ಚಟ್ನಾಳ ಅವರನ್ನು ಡಾ.ಜಿ.ಬಿ.ವಿಸಾಜಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿ ದಾಸೋಹಿ ಶಾಂತಯ್ಯ ಸ್ವಾಮಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ: ₹50 ಲಕ್ಷ ಅನುದಾನಕ್ಕೆ ವಿಜಯ ಸಿಂಗ್ ಮನವಿ
ಇದೇವೇಳೆ ಬಾಬುರಾವ ದಾನಿ, ಆಶಾ ರಾಠೋಡ, ಪ್ರಭುರಾವ ಸಾವಳೆ, ವಿಜಯಕುಮಾರ ಪರ್ಮಾ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬಸವಶ್ರೀ ಬಸವರಾಜ ಮಾಳಗೆ ಅವರಿಂದ ಭಕ್ತಿದಾಸೋಹ ನಡೆಯಿತು. ದೀಪಕ ಠಮಕೆ ನಿರೂಪಿಸಿದರು. ಚನ್ನಪ್ಪ ಅಳಸೂರು, ಈರಣ್ಣ ಹೂಗಾರ, ಸುದರ್ಶನ ರಾಠೋಡ, ಧನರಾಜ ದಾಡಗಿ ಅವರು ವಚನ ಸಂಗೀತ ನಡೆಸಿಕೊಟ್ಟರು.