ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲ ಎಂಬ ಮಾತು ಸುಳ್ಳಾಗಿದೆ. ಸುದ್ದಿಯಲ್ಲಿ ನಿಖರತೆ, ಸ್ಪಷ್ಟತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಕಾರಣಕ್ಕೆ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವ ಹಾಗೂ ಮಹತ್ವವನ್ನು ಕಾಪಾಡಿಕೊಂಡಿದೆ ಎಂದು ಕಲಬುರಗಿ ವಿಭಾಗದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಅಭಿಪ್ರಾಯಪಟ್ಟರು.
ಔರಾದ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ʼಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲೂ ಜನರು ಯಾವುದೇ ಮೂಲದ ಸುದ್ದಿಯ ಖಚಿತತೆಗೆ ಮುದ್ರಣ ಮಾಧ್ಯಮ ಮೇಲೆ ಅವಲಂಬಿತರಾಗಿದ್ದಾರೆ. ಇದು ಪತ್ರಿಕೆಗಳ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. 2000ರಲ್ಲಿ ಕನ್ನಡದ ಒಟ್ಟು ಪತ್ರಿಕೆಗಳ ಪ್ರಸಾರ 4 ಲಕ್ಷ ಇತ್ತು. ಈಗ ಅದರ ಸಂಖ್ಯೆ 44ಲಕ್ಷಕ್ಕೆ ಏರಿಕೆಯಾಗಿದೆ ಎಂಬುದು ಹೆಮ್ಮೆಯ ಸಂಗತಿʼ ಎಂದರು.
‘ಪತ್ರಕರ್ತರಿಗೆ ಅಧ್ಯಯನದ ಗುಣ ಇಲ್ಲದಿದ್ದರೆ ಅವರಿಂದ ಉತ್ತಮ ಬರಹ ಹೊರಬರಲು ಸಾಧ್ಯವಿಲ್ಲ. ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ ಎಂಬುದು ಬರಹದ ಭಾಗವಾಗಬೇಕು. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯಾದರೆ ಮಾತ್ರ ಜನಪರ ಪತ್ರಕರ್ತ ಎನಿಸಿಕೊಳ್ಳಲು ಸಾಧ್ಯʼ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಸಮಾಜವನ್ನು ತಿದ್ದುವ ಜವಾಬ್ದಾರಿ ಸದಾ ಪತ್ರಕರ್ತರ ಮೇಲೆ ಇದೆ ಎಂಬುದನ್ನು ಮರೆಯುವಂತಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ಒಂದು ಸುದ್ದಿಯನ್ನು ತಕ್ಷಣ ಬಿತ್ತರಿಸಿದರೂ ಅದರ ಕುರಿತು ಆಳವಾದ ಅಧ್ಯಯನ ನಡೆಸಿ ವಿಸ್ತೃತ ವರದಿ ನೀಡುವಷ್ಟು ವ್ಯವಧಾನ ಇರುವುದಿಲ್ಲ. ಆದರೆ, ಮುದ್ರಣ ಮಾಧ್ಯಮದಲ್ಲಿ ಘಟನೆಯ ಹಲವು ಆಯಾಮಗಳನ್ನು, ವಿಶ್ಲೇಷಣೆಯನ್ನು ನೋಡಲು ಸಾಧ್ಯʼ ಎಂದು ಅಭಿಪ್ರಾಯಪಟ್ಟರು.
ʼಔರಾದ್ ತಾಲೂಕಿನ ಜನತೆ ಅತ್ಯಂತ ಸಹೋದರತ್ವ ಗುಣದವರು. ನಾನು ಅನಿರೀಕ್ಷಿತವಾಗಿ ರಾಜಕಾರಣ ಪ್ರವೇಶಿದೆ, ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಇಲ್ಲಿಂದಲೇ. ಈ ಹಿಂದೆ ವಿಧಾನ ಪರಿಷತ್ ಸದಸ್ಯನಾಗಲು ಇಲ್ಲಿಯ ಜನರ ಕೊಡುಗೆ ಅನನ್ಯ. ಈಗ ನಾನು ಬೇರೆ ಕ್ಷೇತ್ರದಲ್ಲಿದ್ದರೂ ಈ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆʼ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮದ ಕಾರ್ಯ ಅತ್ಯಂತ ಮಹತ್ವದ್ದು. ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಪತ್ರಕರ್ತರು ನ್ಯಾಯ, ನಿಷ್ಠುರತೆ, ಪ್ರಾಮಾಣಿಕತೆ ಹಾಗೂ ಜನರ ದನಿಯಾಗಬೇಕುʼ ಎಂದು ಹೇಳಿದರು.
ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ್ ಮಾತನಾಡಿ, ʼಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ಸಂಶಯದಿಂದ ಕಾಣುವ ಇಂದಿನ ಕಾಲದಲ್ಲಿ ಪತ್ರಿಕೆಗಳಲ್ಲಿ ಮುದ್ರಣವಾದರೆ ಮಾತ್ರ ಜನರು ಹೆಚ್ಚು ನಂಬುತ್ತಾರೆ. ಹಾಗಾಗಿ ಜನಪರ, ಜೀವಪರ ಸುದ್ದಿಗಳ ಮುಖಾಂತರ ಸಮಾಜ ಬದಲಾವಣೆಯ ಹೊಣೆಗಾರಿಕೆ ಪತ್ರಕರ್ತರ ಮೇಲಿದೆʼ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ, ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪೂರೆ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮೊಕ್ತೆದಾರ್ ಪ್ರಾಸ್ತವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ (75ನೇ ಜನ್ಮದಿನ) ಅಂಗವಾಗಿ ವಿಜಯ ಕರ್ನಾಟಕ ಕಲಬುರಗಿ ಆವೃತಿಯ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಅವರಿಗೆ ‘ಕನ್ನಡ ಜಂಗಮ’ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ದೇವರಾಜ ಅರಸು ಪ್ರಶಸ್ತಿ | ಅರ್ಹರ ಆಯ್ಕೆಗೆ ಸಮಿತಿ ರಚನೆ, ದ್ವಾರಕನಾಥ್ & ಮೇಗಲಕೇರಿ ನೇಮಕ
ಸಮಾರಂಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ತಾಲೂಕು ಪಂಚಾಯತ್ ಇಒ ಶಿವಕುಮಾರ ಘಾಟೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಪೃಥ್ವಿರಾಜ್ ಎಸ್, ಹಿರಿಯ ಪತ್ರಕರ್ತ ವಿಜಯಕುಮಾರ ಬೆಲ್ದೆ, ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ ಜಿರೋಬೆ ಸೇರಿದಂತೆ ಪತ್ರಕರ್ತರಾದ ಚನ್ನಬಸವ ಮೊಕ್ತೆದಾರ್, ಅನಿಲ ದೇಶಮುಖ, ಅಮರೇಶ್ವರ ಚಿದ್ರೆ, ಬಾಲಾಜಿ ಕುಂಬಾರ, ಸುಧೀರ್ ಪಾಂಡ್ರೆ, ಅಹ್ಮದ್ ಜಂಬಗಿ, ರವಿಕುಮಾರ ಮಠಪತಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ, ಶಿವಕುಮಾರ ಸಾದುರೆ, ರವಿಕುಮಾರ ಶಿಂಧೆ, ವಿನೋದ ಚಿದ್ರೆ, ಪ್ರಭುಲಿಂಗ ಸ್ವಾಮಿ, ರಾಜಕುಮಾರ ಚಾಂಬೊಳೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪತ್ರಕರ್ತ ಮನ್ಮಥಪ್ಪ ಸ್ವಾಮಿ ಸ್ವಾಗತಿಸಿದರು. ರಿಯಾಜ್ ಪಾಶ ಕೊಳ್ಳೂರ್, ಅಮರ ಸ್ವಾಮಿ ನಿರೂಪಿಸಿದರು. ಮಲ್ಲಪ್ಪ ಗೌಡಾ ವಂದಿಸಿದರು.