ಜೇಷ್ಠತೆ ಆಧಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಆದೇಶ ಶೀಘ್ರ ಹೊರ ಬೀಳುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿರುವ ನಾಟ್ಯಶ್ರೀ ನೃತ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ 2025ನೇ ಸಾಲಿನ ದಿನದರ್ಶಿಕೆ, ಪಾಕೆಟ್ ಡೈರಿ ಬಿಡುಗಡೆ ಹಾಗೂ ಶಿಕ್ಷಣ ಇಲಾಖೆಯಿಂದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರ ಸರಿ ಸಮನಾದ ಸ್ಥಾನಮಾನ ಕೊಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ಖಾಲಿ ಇರುವ ಅನುದಾನಿತ ಶಾಲೆಗಳ ಶಿಕ್ಷಕರ ಹುದ್ದೆಗಳ ಭರ್ತಿಗೂ ಪ್ರಯತ್ನಿಸಲಾಗುವುದು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮಿಕ ಶಿಕ್ಷಕರು ಹಾಗೂ ಅನುದಾನಿತ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಗಮನ ಸೆಳೆದಿದ್ದಾರೆʼ ಎಂದು ಹೇಳಿದರು.
ಸಂಘದ ದಿನದರ್ಶಿಕೆ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ‘ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಮಾತನಾಡಿ, ‘ಸಂಘದ ದಿನದರ್ಶಿಕೆ 2025ನೇ ಸಾಲಿನ ಸಮಗ್ರ ಮಾಹಿತಿ ಒಳಗೊಂಡಿದೆ. ಪಾಕೆಟ್ ಡೈರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರಿ ಕಚೇರಿಗಳ ಮೊಬೈಲ್ ಸಂಖ್ಯೆಗಳು ಸೇರಿದಂತೆ ಉಪಯುಕ್ತ ಮಾಹಿತಿಗಳಿವೆ’ ಎಂದು ಹೇಳಿದರು.
ಪಾಕೆಟ್ ಡೈರಿ ಬಿಡುಗಡೆ ಮಾಡಿದ ಸಂಘದ ರಾಜ್ಯ ಅಧ್ಯಕ್ಷ ಸಂದೀಪ್ ಬೂದಿಹಾಳ್ ಮಾತನಾಡಿ, ‘ಸಂಘ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸದಾ ಸಿದ್ಧವಿದೆ’ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಟಿಟಿ ವಾಹನ – ಬೈಕ್ ಮುಖಾಮುಖಿ ಡಿಕ್ಕಿ; ವೈದ್ಯ ಸಾವು
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಮಂಗಲಗಿ, ವಿಭಾಗೀಯ ಪ್ರಮುಖ ಚಂದ್ರಶೇಖರ ಪಾಟೀಲ, ಜಿಲ್ಲಾ ಘಟಕದ ಗೌರವ ಸಲಹೆಗಾರ ಬಸವರಾಜ ಸ್ವಾಮಿ ಹೆಡಗಾಪುರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಸಂತೋಷ ಸೋಲಪುರೆ, ಮಹೇಶ ಬಸರಕೂಡ, ನರಸಾರೆಡ್ಡಿ ಮತ್ತಿತರರು ಇದ್ದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಪಾಟೀಲ ಸ್ವಾಗತಿಸಿದರು. ಕಾರ್ಯಕಾರಿಣಿ ಸದಸ್ಯ ಬಸವರಾಜ ಮೂಲಗೆ ನಿರೂಪಿಸಿದರು. ಸಂತೋಷ ಮಂಗಳೂರೆ ವಂದಿಸಿದರು.