ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ‘ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರೋಧಿ ಜಂಟಿ ಕ್ರಿಯಾ ಸಮಿತಿ’ಯು ಏ. 24ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಏ.24ರಂದು ಬೆಳಿಗ್ಗೆ 10ಕ್ಕೆ ಬೀದರ್ ನಗರದ ಜಾಮೀಯಾ ಮಸೀದಿಯಿಂದ ಪ್ರತಿಭಟನಾ ರ್‍ಯಾಲಿ ಆರಂಭವಾಗಲಿದೆ. ಮಹಮೂದ್ ಗಾವಾನ್ ಚೌಕ, ಶಹಾಗಂಜ್ ಮುಖ್ಯರಸ್ತೆ, ಕ್ರಾಂತಿ ಗಣೇಶ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ತಲುಪಲಿದೆ. ಅಲ್ಲಿ ಸಾರ್ವಜನಿಕ ಸಭೆ ನಡೆಸಿ, ಆನಂತರ ರಾಷ್ಟ್ರಪತಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ ಸಂವಿಧಾನ, ಜಾತ್ಯತೀತ ಸಿದ್ಧಾಂತ ಹಾಗೂ ಬಹುತ್ವ ಸಂಸ್ಕೃತಿಯಲ್ಲಿ ನಂಬಿಕೆ ಹೊಂದಿರುವ ಪ್ರಜ್ಞಾವಂತ ನಾಗರಿಕರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಸಂಚಾಲಕ ಹಾಗೂ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಅಬ್ದುಲ್ ಖದೀರ್ ಮನವಿ ಮಾಡಿದ್ದಾರೆ.