ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸುಭಾಷ್ ಅವರ ಸಾವಿಗೆ ಕಾರಣರಾದ ಪಿಡಿಒ ಸುಗಂಧ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಪಿಡಿಒ ಅಮಾನತಿಗೆ ಆಗ್ರಹಿಸಿದರು.
ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಅಷ್ಟೂರೆ ಮಾತನಾಡಿ,ʼಸಿಂಧನಕೇರಾ ಗ್ರಾಮ ಪಂಚಾಯಿತಿಯಲ್ಲಿ ಅನೇಕ ವರ್ಷಗಳಿಂದ ಸುಭಾಷ್ ಅವರು ಕಂಪ್ಯೂಟರ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದರು. ಪಿಡಿಒ ಸುಗಂಧ ಅವರು ಸುಭಾಷ್ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹೆಚ್ಚಿನ ಒತ್ತಡ ಹಾಕಿದ್ದರಿಂದಾಗಿ ಅವರು ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದರು.
ʼಈ ಕುರಿತು ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಸುಭಾಷ್ ಮೃತಪಟ್ಟು 20 ದಿನಗಳು ಕಳೆದಿವೆ. ಆದರೆ ಈವರೆಗೆ ಅವರನ್ನು ಬಂಧಿಸಿಲ್ಲ ಮತ್ತು ಸೇವೆಯಿಂದ ವಜಾಗೊಳಿಸಿಲ್ಲ. ಹೀಗಾಗಿ ತಕ್ಷಣ ಅವರನ್ನು ವಜಾಗೊಳಿಸಬೇಕುʼ ಎಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಎದುರುಗಡೆ ನಡೆಯುತ್ತಿದ್ದ ಪ್ರತಿಭಟನೆ ವಿಷಯ ತಿಳಿದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಭೇಟಿ ನೀಡಿದರು.

ʼಈಗಾಗಲೇ ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮೃತರ ಕುಟುಂಬಕ್ಕೆ ಪಂಚಾಯಿತಿಯಲ್ಲಿ ಒಂದು ನೌಕರಿ ಮತ್ತು ಪರಿಹಾರ ಒದಗಿಸುವಂತೆ ಒತ್ತಾಯಿಸಲಾಗುವುದುʼ ಎಂದು ಭರವಸೆ ನೀಡಿದರು.
ಸಿದ್ದಾರ್ಥ್ ಡಾಂಗೆ, ವೈಜಿನಾಥ ಸಿಂಧೆ, ಸುಶೀಲ್ ಕುಮಾರ್ ಭೋಲಾ, ಅಶೋಕ್ ಸಿಂಧೆ, ಮಾರುತಿ ಭಾವಿಕಟ್ಟಿ, ಸುಭಾಷ್ ಮಹಗಾಂವಕರ್, ಅನಂತ ಮಾಳಗೆ, ಸಿದ್ದಾರ್ಥ್ ಜಾನವೀರ, ತುಕಾರಾಮ ಲಡಕರ್, ಭೀಮರೆಡ್ಡಿ ಸಿಂಧನಕೇರಾ, ಯುವರಾಜ ಐಹೋಳಿ ಸೇರಿದಂತೆ ಅನೇಕರಿದ್ದರು.