2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ.8ರಂದು ಪ್ರಕಟಗೊಂಡಿದ್ದು, ಬೀದರ್ ಜಿಲ್ಲೆ ಶೇ.67.31ರಷ್ಟು ಫಲಿತಾಂಶ ಸಾಧಿಸುವ ಮೂಲಕ ರಾಜ್ಯದಲ್ಲಿ 22ನೇ ಸ್ಥಾನದಲ್ಲಿದೆ.
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 78 ಫಲಿತಾಂಶ ದಾಖಲಾಗಿ 18ನೇ ಸ್ಥಾನದಲ್ಲಿತ್ತು. 2023–24ರಲ್ಲಿ 19ನೇ ಸ್ಥಾನಕ್ಕೆ ಕುಸಿದರೂ ಶೇ 81.69 ಫಲಿತಾಂಶ ಬಂದಿತ್ತು.
ಈ ಬಾರಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬೀದರ್ ಮೊದಲ ಸ್ಥಾನ ಪಡೆದರೂ ಜಿಲ್ಲೆಯ ಫಲಿತಾಂಶ ಜೊತೆಗೆ ಸ್ಥಾನದಲ್ಲಿಯೂ ಭಾರಿ ಕುಸಿತ ಕಂಡಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 18,730 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 12,608 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಆದರೆ, ಈ ಸಲ ಜಿಲ್ಲೆಯ 13 ಪಿಯು ಕಾಲೇಜುಗಳು ಶೂನ್ಯ ಫಲಿತಾಂಶ ಸಾಧಿಸಿದ್ದು ಅಘಾತಕಾರಿ ಬೆಳವಣಿಗೆಯಾಗಿದೆ.
ಯಾವ್ಯಾವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ :
ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಿಯು ಫಲಿತಾಂಶವನ್ನು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳೆಂದು ಮೂರು ವಿಭಾಗಗಳಾಗಿ ವರ್ಗೀಕರಿಸಿದೆ. ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ ಪಿಯು ಕಾಲೇಜು 24, ಅನುದಾನ ಸಹಿತ ಕಾಲೇಜು 42 ಹಾಗೂ 107 ಅನುದಾನ ರಹಿತ ಕಾಲೇಜುಗಳಿವೆ.
ಜಿಲ್ಲೆಯಲ್ಲಿ ಅನುದಾನ ರಹಿತ 8, ಅನುದಾನ ಸಹಿತ 4 ಹಾಗೂ 1 ಸರ್ಕಾರಿ ಕಾಲೇಜು ಸೇರಿ ಒಟ್ಟು 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿರುವುದು ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
ಅನುದಾನ ರಹಿತ ಒಟ್ಟು 107 ಪಿಯು ಕಾಲೇಜುಗಳಿವೆ. ಈ ಪೈಕಿ 8 ಕಾಲೇಜುಗಳಲ್ಲಿ ಫಲಿತಾಂಶ ಶೂನ್ಯ ದಾಖಲಾಗಿದೆ. ಇವುಗಳಲ್ಲಿ ಜೆಷಮಿನ್ ಪಿಯು ಕಾಲೇಜು ಬೀದರ್, ಗುಲಶನ್ ಪಿಯು ಕಾಲೇಜು ಬೀದರ್, ಶ್ರಮಜೀವಿ ಪಿಯು ಕಾಲೇಜು ಬೀದರ್, ವಿವಿಕೆ ಪಿಯು ಕಾಲೇಜು ಬೀದರ್, ಹಂಜಾಲಾ ಪಿಯು ಕಾಲೇಜು ಬೀದರ್, ಶ್ರೀ ವೈಜಿನಾಥ ಕಮಠಾಣೆ ಪಿಯು ಕಾಲೇಜು ಬೀದರ್, ಸಿರಾಜ್ ಉಲ್ ಉಲುಮ್ ಪಿಯು ಕಾಲೇಜು ಮನ್ನಳ್ಳಿ, ಬೀದರ್ ಹಾಗೂ ಶ್ರೀ ಸಾಯಿ ಇಂಡಿಪೆಂಡೆಂಟ್ ಕಾಲೇಜು ಭಾಲ್ಕಿ ಶೂನ್ಯ ಫಲಿತಾಂಶ ಕಾಲೇಜುಗಳಾಗಿವೆ.
ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ನಾಲ್ಕು ಕಾಲೇಜುಗಳಿಗೆ ನೂರಕ್ಕೆ ನೂರು ಫಲಿತಾಂಶ ಬಂದಿದೆ. 17 ಕಾಲೇಜುಗಳಿಗೆ ಶೇ 90ಕ್ಕಿಂತ ಹೆಚ್ಚು ಫಲಿತಾಂಶ ಲಭಿಸಿದೆ. 23 ಕಾಲೇಜುಗಳು ಶೇ 50ಕ್ಕಿಂತ ಕಡಿಮೆ ಫಲಿತಾಂಶ ದೊರೆತಿದೆ.
ಜಿಲ್ಲೆಯ ಒಟ್ಟು ಅನುದಾನ ಸಹಿತ 42 ಕಾಲೇಜುಗಳಲ್ಲಿ 4ಕ್ಕೆ ಶೂನ್ಯ ಫಲಿತಾಂಶ ಬಂದಿದೆ. ಎಂಆರ್‌ಎ ಪಿಯು ಕಾಲೇಜು ಭಾಲ್ಕಿ, ಜಿ.ಅಗರ್‌ವಾಲ್ ಗರ್ಲ್ಸ್ ಪಿಯು ಕಾಲೇಜು ಚಿಟಗುಪ್ಪ, ಎಸ್‌ಪಿಕೆಎಸ್ ಇಂಡಿಪೆಂಡೆಂಟ್ ಕಾಲೇಜು ಬಸವಕಲ್ಯಾಣ, ಪೂಜ್ಯ ಶಿವಲಿಂಗ ಪಿಯು ಕಾಲೇಜು ಹುಮನಾಬಾದ್ ಶೂನ್ಯ ಫಲಿತಾಂಶ ಸಂಪಾದಿಸಿದ ಕಾಲೇಜುಗಳಾಗಿವೆ.
ಇವುಗಳಲ್ಲಿ ಐದು ಕಾಲೇಜುಗಳು ಶೇ 10ಕ್ಕಿಂತ ಕಡಿಮೆ ಹಾಗೂ 20 ಕಾಲೇಜುಗಳಿಗೆ ಶೇ 50ಕ್ಕಿಂತ ಕಡಿಮೆ ಫಲಿತಾಂಶ ದೊರೆತಿದೆ. ಯಾವುದೇ ಕಾಲೇಜಿಗೂ ನೂರಕ್ಕೆ ನೂರು ಫಲಿತಾಂಶ ಬಂದಿಲ್ಲ. ಶೇ 85ಕ್ಕಿಂತ ಅಧಿಕ ಫಲಿತಾಂಶವೂ ದೊರೆತಿಲ್ಲ. ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದ ಜನತಾ ಪ್ರವೀಣ ಪಿಯು ಕಾಲೇಜು ಶೇ 82.86 ರಷ್ಟು ಫಲಿತಾಂಶ ಗಳಿಸುವ ಮೂಲಕ ಅನುದಾನ ಸಹಿತ ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಇನ್ನು ಜಿಲ್ಲೆಯ 24 ಸರ್ಕಾರಿ ಪಿಯು ಕಾಲೇಜುಗಳ ಪೈಕಿ 1ಕ್ಕೆ ಶೂನ್ಯ ಫಲಿತಾಂಶ, ಎರಡು ಕಾಲೇಜು ಶೇ 10ರೊಳಗೆ, ಆರು ಕಾಲೇಜುಗಳಿಗೆ ಶೇ 30ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಯಾವ ಕಾಲೇಜಿಗೂ ಒಟ್ಟು ಶೇ 80ರಷ್ಟು ಫಲಿತಾಂಶ ಸಾಧಿಸಲು ಸಾಧ್ಯವಾಗಿಲ್ಲ. ಅರ್ಧದಷ್ಟು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶೇ 50 ರಷ್ಟು ಫಲಿತಾಂಶ ಗಳಿಸಲು ಆಗಲಿಲ್ಲ.
ಪರೀಕ್ಷೆ ಬರೆದ ಇಬ್ಬರು ವಿದ್ಯಾರ್ಥಿಗಳು ಫೇಲ್ :
ಪ್ರಸಕ್ತ ಸಾಲಿನಲ್ಲಿ ಭಾಲ್ಕಿ ತಾಲ್ಲೂಕಿನ ಮೆಹಕರ್ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಗೆ ಕೇವಲ ನಾಲ್ಕು ಮಕ್ಕಳ ದಾಖಲಾತಿ ಇತ್ತು. ಅವರಲ್ಲಿ 2 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು, ಪರೀಕ್ಷೆ ಬರೆದ ಉಳಿದ 2 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಇಬ್ಬರು ಉರ್ದು ಮಾಧ್ಯಮ ವಿದ್ಯಾರ್ಥಿಗಳಿದ್ದರು. ಕಾಲೇಜಿನ 4 ಜನ ಉಪನ್ಯಾಸಕರು ಒಂದೇ ಬಾರಿ ವರ್ಗಾವಣೆಯಾದ ಪರಿಣಾಮ ವಿದ್ಯಾರ್ಥಿಗಳ ಕಲಿಕೆಗೆ ಭಾರಿ ಹಿನ್ನಡೆಯಾಗಿತ್ತು. ಬೇರೆ ಉಪನ್ಯಾಸಕರನ್ನು ನಿಯೋಜಿಸಿದರೂ ಕಲಿಕೆಗೆ ಬೇಕಾದ ಪೂರಕ ವಾತಾವರಣ ಸಿಗಲಿಲ್ಲ. ಪ್ರಥಮ ವರ್ಷದಲ್ಲಿ ಕೇವಲ ಮೂರು ವಿದ್ಯಾರ್ಥಿಗಳು ಮಾತ್ರ ಇದ್ದರು. ಸದ್ಯ ಈ ಕಾಲೇಜಿನಲ್ಲಿ ಇಬ್ಬರು ಖಾಯಂ ಉಪನ್ಯಾಸಕರಿದ್ದಾರೆ.
ಕಮಲನಗರ ತಾಲ್ಲೂಕಿನ ಠಾಣಾಕುಶನೂರ ಸರ್ಕಾರಿ ಪಿಯು ಕಾಲೇಜು ಶೇ 78.82ರಷ್ಟು ಫಲಿತಾಂಶ ಸಾಧಿಸಿದ್ದು, ಇದು ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಲ್ಲಿಯೇ ಮೊದಲ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿರುವ ಒಟ್ಟು 173 ಪಿಯು ಕಾಲೇಜುಗಳಲ್ಲಿ ಅನುದಾನ ರಹಿತ 4 ಕಾಲೇಜುಗಳು ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಗಳಿಸಿವೆ. ಉಳಿದ ಯಾವ ಸರ್ಕಾರಿ, ಅನುದಾನ ಸಹಿತ ಹಾಗೂ ಖಾಸಗಿ ಕಾಲೇಜುಗಳಿಗೆ ನೂರಕ್ಕೆ ನೂರು ಫಲಿತಾಂಶ ದೊರೆತಿಲ್ಲ.
ಈ ಬಾರಿ ಒಟ್ಟಾರೆ ಶೇ 14.38 ರಷ್ಟು ಕುಸಿತ ಕಂಡಿದೆ. ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕಾರ್ಯಾಗಾರ ನಡೆಸಿದರೂ ಫಲಿತಾಂಶ ಕಳಪೆ ಆಗಿದೆ ಎಂಬುದು ಗಮನಾರ್ಹ ಸಂಗತಿ.
ʼಜಿಲ್ಲೆಯ ಕೆಲ ಕಾಲೇಜು ಹೆಸರಿಗಷ್ಟೇ ಇವೆ, ಅಲ್ಲಿ ಮಕ್ಕಳು ಬೆರಳಣಿಯಷ್ಟೇ ಇದ್ದಾರೆ. ಅಲ್ಲಿ ನುರಿತ ಉಪನ್ಯಾಸಕರ ಕೊರತೆ ಕಾರಣಕ್ಕೆ ಸರಿಯಾಗಿ ತರಗತಿ ನಡೆಯುವುದಿಲ್ಲ. ಫಲಿತಾಂಶ ಸುಧಾರಣೆಗೆ ಇಲಾಖೆ ಎಷ್ಟೇ ಪ್ರಯತ್ನಿಸಿದರೂ ವಿದ್ಯಾರ್ಥಿ ಹಾಗೂ ಪೋಷಕರ ಕಲಿಕಾಸಕ್ತಿ ಕೊರತೆಯೂ ಸಹಜವಾಗಿ ಇದ್ದೇ ಇದೆ. ಇನ್ನು ಪರೀಕ್ಷೆಗೆ ವೆಬ್‌ಕಾಸ್ಟಿಂಗ್ ಇರುವುದು ಫಲಿತಾಂಶ ಕುಸಿತಕ್ಕೆ ಇನ್ನೊಂದು ಕಾರಣವಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಫಲಿತಾಂಶ ಸುಧಾರಣೆಗೆ ಇಲಾಖೆ ಪ್ರಯತ್ನಿಸಬೇಕುʼ ಎಂದು ಶಿಕ್ಷಣ ತಜ್ಞರ ಅಭಿಪ್ರಾಯ.
ಈ ಸುದ್ದಿ ಓದಿದ್ದೀರಾ? ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 1)
ʼದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖೆಯಿಂದ ಹಲವು ಪ್ರಯತ್ನಗಳು ನಡೆಸಿದರೂ ಈ ಬಾರಿ ಜಿಲ್ಲೆಯ ಪಿಯು ಫಲಿತಾಂಶ ಕುಸಿತ ಬೇಸರ ತರಿಸಿದೆ. 13 ಕಾಲೇಜುಗಳಿಗೆ ಶೂನ್ಯ ಫಲಿತಾಂಶ ಬಂದಿದ್ದು ಆಘಾತಕಾರಿ. ಈ ಬಗ್ಗೆ ಜಿಲ್ಲೆಗೆ ಬೆಂಗಳೂರಿನಿಂದ ಇಲಾಖೆ ತಂಡ ಆಗಮಿಸಲಿದ್ದು, ಪರಾಮರ್ಶೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದುʼ ಎಂದು ಪಿಯು ಉಪನಿರ್ದೇಶಕ ಚಂದ್ರಕಾಂತ ಶಹಾಬಾದಕರ್ ‘ಈದಿನ.ಕಾಮ್‘ಗೆ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.