ಮಂಗಳವಾರ ಸಂಜೆ ಸುರಿದ ಮಳೆಯ ಪರಿಣಾಮ ಹುಲಸೂರ ತಾಲ್ಲೂಕಿನ ಗಡಿಗೌಡಗಾಂವ್ ಗ್ರಾಮದ ಗಡಿ ಎದುರಿನ ಬಡಾವಣೆಯ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಚರಂಡಿಗಳು ಮುಚ್ಚಿರುವುದೇ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಹಲವು ತಿಂಗಳಿನಿಂದ ಒಳಚರಂಡಿಯನ್ನು ಸ್ವಚ್ಛಗೊಳಿಸಿಲ್ಲ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಚರಂಡಿಗಳಿಂದ ಸರಾಗವಾಗಿ ನೀರು ಹೋಗಲು ಜಾಗವಿಲ್ಲ. ಸಣ್ಣ ಪ್ರಮಾಣದಲ್ಲಿ ಮಳೆ ಬಿದ್ದರೂ ಸಹ ನೀರು ಚರಂಡಿಯಲ್ಲಿ ಹೋಗದೇ ಅದರೊಳಗಿನ ಮಲ, ಮೂತ್ರದ ಗಲಿಜಿನೊಂದಿಗೆ ಮನೆಗಳಿಗೆ ನುಗ್ಗತ್ತಿದೆ ಎಂದು ಸ್ಥಳೀಯ ನಿವಾಸಿ ಚಂದ್ರಪ್ಪಾ ಬಿರಾದರ್ ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಆದರೆ ಚರಂಡಿ ನಿರ್ಮಿಸಿಲ್ಲ. ಚರಂಡಿ ವ್ಯವಸ್ಥೆ ಸರಿಪಡಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೆ ಮಳೆಯಾದರೆ ಇಲ್ಲಿನ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆʼ ಎಂದು ಹೇಳಿದ್ದಾರೆ.

ʼಸುಮಾರು 20 ವರ್ಷಗಳ ಹಿಂದೆ ಚರಂಡಿ ನಿರ್ಮಿಸಲಾಗಿದೆ. ಇದರಿಂದ ಬೇರೆ ವಾರ್ಡ್‌ಗಳ ಚರಂಡಿ ನೀರು ನಮ್ಮ ಓಣಿಯ ಚರಂಡಿಗೆ ನುಗ್ಗುತ್ತವೆ. ಚರಂಡಿ ನೀರು ಸರಾಗವಾಗಿ ಮುಂದೆ ಹೋಗಲು ವ್ಯವಸ್ಥೆ ಇರದಕ್ಕೆ ನೀರು ಮನೆಗಳಿಗೆ ನುಗ್ಗುತ್ತಿವೆ. ಇದರಿಂದ ಮಕ್ಕಳು, ವೃದ್ಧರು ಓಡಾಡಲು ಭಯ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಚರಂಡಿ ಸ್ವಚ್ಛಗೊಳಿಸಿ, ಹೊಸ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕುʼ ಎಂದು ನಿವಾಸಿಗಳಾದ ದಯಾನಂದ ಭರಮಶೆಟ್ಟೆ, ಅಮರ ಭರಮಶೆಟ್ಟೆ, ಧೂಳಪ್ಪ ಭರಮಶೆಟ್ಟೆ, ಬಸವರಾಜ ಭರಮಶೆಟ್ಟೆ, ಬಿಪಿನ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? Second PUC Result | ಪಿಯುಸಿ ಫಲಿತಾಂಶ : 19 ರಿಂದ 22ನೇ ಸ್ಥಾನಕ್ಕೆ ಕುಸಿದ ಬೀದರ್
ಗಡಿಗೌಡಗಾಂವ್ ಗ್ರಾಮದ ವಾರ್ಡ್‌ಗಳಲ್ಲಿ ಚರಂಡಿ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಇವತ್ತು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಗಡಿಗೌಡಗಾಂವ್ ಗ್ರಾಮ ಪಂಚಾಯಿತಿ ಪಿಡಿಒ ಸುಲೋಚನಾ ಅವರು ʼಈದಿನ.ಕಾಮ್ʼ ಜೊತೆ ಮಾತನಾಡಿ ಪ್ರತಿಕ್ರಿಯಿಸಿದ್ದಾರೆ.