ಬೀದರ್ ಜಿಲ್ಲಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾಲ್ಕಿ ತಾಲೂಕಿನ ಹೋಬಳಿ ಕೇಂದ್ರವಾದ ನಿಟ್ಟೂರ(ಬಿ) ನಾಡ ಕಚೇರಿ ಕಟ್ಟಡ ಶಿಥಿಲಗೊಂಡು ನೀರು ಸೋರುತ್ತಿದ್ದು, ಕಚೇರಿ ಆವಣರದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಇಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ನಾಡ ಕಚೇರಿ ಕಟ್ಟಡ ಹಳೆಯದಾಗಿರುವುದರಿಂದ ಬಳಸಲು ಯೋಗ್ಯಾಗಿಲ್ಲ. ಒಟ್ಟು ಮೂರು ಕೋಣೆಗಳಲ್ಲಿ ಎರಡು ಕೋಣೆಗಳ ಚಾವಣಿ ಬಿರುಕು ಸ್ವಲ್ಪ ಮಳೆಯಾದರೂ ಛಾವಣಿ ಮೇಲಿಂದ ನೀರು ಸುರಿಯುತ್ತಿದೆ. ಕಂಪ್ಯೂಟರ್ ಹಾಗೂ ದಾಖಲೆಗಳ ಮೇಲೆ ಹನಿ ಹನಿ ನೀರು ಬೀಳುತ್ತಿದ್ದು, ಸಿಬ್ಬಂದಿ ಇಂತಹ ಅವ್ಯವಸ್ಥೆ ನಡುವೆ ಕೆಲಸ ಮಾಡುತ್ತಿದ್ದಾರೆ.
ಸಾಧಾರಣ ಮಳೆ ಸುರಿದರೆ ಸೋರುವ ಈ ಕಟ್ಟಡದಲ್ಲಿ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಯಿಂದ ನೀರು ಸೋರಿಕೆಯ ಪ್ರಮಾಣ ಹೆಚ್ಚಾಗಿದೆ. ಮಳೆ ನೀರು ಕಚೇರಿ ಒಳಗೆ ಇಳಿಯುತ್ತಿದ್ದು, ವಿವಿಧ ಕಡತಗಳು, ದಾಖಲೆ ಪತ್ರಗಳು ತೇವಗೊಂಡು ಹಾಳಾಗುತ್ತಿವೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.
ʼನಿಟ್ಟೂರ(ಬಿ) ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ರೈತರು, ವಿದ್ಯಾರ್ಥಿಗಳು ಸೇರಿದಂತೆ ಸರ್ಕಾರಿ ಕೆಲಸ ಕಾರ್ಯಕ್ಕೆ ನಾಡ ಕಚೇರಿಗೆ ಬರುವುದು ಅನಿವಾರ್ಯ. ಆದರೆ ಇಲ್ಲಿ ಸೂಕ್ತ ಸೌಲಭ್ಯವಿಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ಛಾವಣಿ ಸೋರುತ್ತಿರುವುದರಿಂದ ಕಡತಗಳೂ ಸುರಕ್ಷಿತವಾಗಿಲ್ಲ. ಆದಷ್ಟು ಬೇಗ ಹೊಸ ಕಟ್ಟಡಕ್ಕೆ ಕ್ರಮ ಕೈಗೊಳ್ಳಬೇಕುʼ ಎಂದು ನಾಗರಾಳ ಗ್ರಾಮದ ಗ್ರಾ.ಪಂ. ಸದಸ್ಯ ಆಕಾಶ ಸಿಂಧೆ ಆಗ್ರಹಿಸಿದ್ದಾರೆ.
ʼನಾಡ ಕಚೇರಿಗೆ ಹೋಗಿ ಬರಲು ಸರಿಯಾದ ದಾರಿ ಇಲ್ಲ. ಮಳೆ ಬಂದರೆ ಅಪಾರ ಪ್ರಮಾಣದಲ್ಲಿ ನೀರು ನಿಲ್ಲುತ್ತದೆ. ಇಡೀ ಪರಿಸರವೂ ಹಾಳಾಗಿದೆ. ಸಂಬಂಧ ಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ಎದುರಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕುʼ ಎಂದು ಗ್ರಾಮದ ವಿದ್ಯಾರ್ಥಿ ಮುಖಂಡ ಜಾವೀದ್ ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ʼಸದ್ಯ ಪ್ರವಾಸಿ ಮಂದಿರದ ಕಟ್ಟಡದಲ್ಲಿ ನಾಡ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಡ ಹಳೆಯದಾಗಿದ್ದು, ಅಧಿಕ ಮಳೆಯಾದರೆ ಛಾವಣಿ ಸೋರುತ್ತದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ, ಶೀಘ್ರದಲ್ಲೇ ಕಟ್ಟಡದ ದುರಸ್ತಿ ಕಾರ್ಯ ಆಗುತ್ತಿದೆ. ಹೊಸ ಕಟ್ಟಡಕ್ಕೆ ಈಗಾಗಲೇ ಜಾಗ ಮಂಜೂರಾಗಿದೆ. ನೂತನ ಕಟ್ಟಡ ಆಗುವವರೆಗೂ ಇದರಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನಿಟ್ಟೂರ(ಬಿ) ನಾಡ ಕಚೇರಿ ಉಪತಹಸೀಲ್ದಾರ್ ಈರಣ್ಣಾ ʼಈದಿನʼಕ್ಕೆ ತಿಳಿಸಿದ್ದಾರೆ.
https://shorturl.fm/m1emU