ಬೀದರ್ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯ ಆಗಿರುವುದರಿಂದ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿ (ಬಯೋಮೆಟ್ರಿಕ್) ಆಗಿರುವ ಬಗ್ಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಪರಿಶೀಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಔರಾದ (1,636), ಬಸವಕಲ್ಯಾಣ (4,691), ಭಾಲ್ಕಿ (2,919), ಬೀದರ (12,873), ಹುಮನಾಬಾದ (2,585), ಕಮಲನಗರ (1,245), ಹುಲಸೂರ (160), ಚಿಟಗುಪ್ಪಾ (1,379) ಸೇರಿ ಒಟ್ಟು 27,488 ಬಾಕಿ ಪಡಿತರದಾರರ ಇ-ಕೆವೈಸಿ ಬಾಕಿ ಇದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ʼಇ-ಕೆವೈಸಿ ಸಂಗ್ರಹಣೆಯ ಕಾರ್ಯ ಪ್ರತಿ ದಿನ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಡಿಸಿಕೊಳ್ಳಲು ಜೂನ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಸರ್ಕಾರವೇ ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಿರುವುದರಿಂದ ಪಡಿತರ ಚೀಟಿದಾರರು ಈ ಪ್ರಕ್ರಿಯೆಗೆ ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆʼ ಎಂದಿದ್ದಾರೆ.
ʼಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ವ್ಯತ್ಯಾಸವಿದ್ದಲ್ಲಿ, ಅಂತಹವರು ತಮ್ಮ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಂಡಲ್ಲಿ ಸರಿಯಾಗುವುದು. ಬೆರಳಚ್ಚು ಹೊಂದಾಣಿಕೆ ಆಗದಿರುವ ಪಡಿತರ ಚೀಟಿ ಸದಸ್ಯರು ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಅಪಡೇಟ್ ಮಾಡಿಕೊಳ್ಳಬೇಕುʼ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ