ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಒಂದು ಜವಾನ ಹುದ್ದೆಗೆ ಸಾವಿರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ತನ್ನೂರಿನ ಗ್ರಾಮ ಪಂಚಾಯತ್‌ನ ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾನೆ.
ಔರಾದ್ ತಾಲೂಕಿನ ಧುಪತಮಹಾಗಾಂವ್ ಗ್ರಾಮದ ಬಡ ಕುಟುಂಬದ ಅಶೋಕ ಮತ್ತು ಪ್ರೇಮಲಾಬಾಯಿ ದಂಪತಿಯ ಪುತ್ರನಾದ ವಿನೋದ ಬಿರಾದರ್ ಚಿಕ್ಕ ವಯಸ್ಸಿನಲ್ಲೇ ದಕ್ಷಿಣ ಆಫ್ರಿಕಾದ ಕಂಪನಿಯೊಂದರಲ್ಲಿ ನೌಕರಿಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾನೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕೆಂಬ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಡಿಜಿಟಲ್ ಗ್ರಂಥಾಲಯಗಳು ನಿರ್ಮಿಸಲಾಗಿದೆ. ಈ ಅರಿವು ಕೇಂದ್ರಗಳು ಅದೆಷ್ಟೋ ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸಿ ಬಾಳಿಗೆ ಬೆಳಕಾಗಿವೆ. ಅದಕ್ಕೆ ತಾಜಾ ಉದಾಹರಣೆ ಯುವಕ ವಿನೋದ ಬಿರಾದರ್ ಎಂದರೂ ತಪ್ಪಾಗಲಾರದು.
ಬಡತನದಲ್ಲಿ ಹುಟ್ಟಿ ಬೆಳೆದ ವಿನೋದ ಬಿ.ಕಾಂ ಪದವೀಧರ. ಲಾಕ್‌ಡೌನ್ ಬಳಿಕ ಸಮಯ ವ್ಯರ್ಥ ಮಾಡಬಾರದೆಂದು ತಮ್ಮೂರಿನ ಡಿಜಿಟಲ್ ಲೈಬ್ರರಿಗೆ ತೆರಳಿ ಪ್ರತಿನಿತ್ಯ ಅಭ್ಯಾಸ ಮಾಡಲು ಶುರು ಮಾಡಿದನು. ಅಲ್ಲಿನ ಕಂಪ್ಯೂಟರ್‌ಗಳು ವಿನೋದನ ಜ್ಞಾನಾರ್ಜನೆಗೆ ಸಾಥ್ ನೀಡಿದವು. ಬಳಿಕ ಆನ್‌ಲೈನ್‌ನಲ್ಲಿಯೇ ಚಾರ್ಟೆಂಡ್ ಅಕೌಂಟೆಂಟ್ (ಸಿಎ) ಕೋರ್ಸ್‌ಗೆ ಸೇರಿ ತರಬೇತಿ ಹೊಂದಿದ್ದಾನೆ.
ಚಾರ್ಟೆಂಡ್ ಅಕೌಂಟೆಂಟ್ ಸಿಎ ಕೋರ್ಸ್ ಮಾಡುತ್ತಲೇ ನೌಕರಿ ಹುಡುಕಾಟ ನಡೆಸಿದ ವಿನೋದ ದಕ್ಷಿಣ ಆಫ್ರಿಕಾದ ಪ್ರತಿಷ್ಠಿತ ಬಹುರಾಷ್ಟೀಯ ಕಂಪನಿಯಲ್ಲಿ ಕರೆದ ಹುದ್ದೆಗೆ ಅರ್ಜಿ ಸಲ್ಲಿಸಿದ. ನಿರೀಕ್ಷೆಯಂತೆ ಕಂಪನಿಯಲ್ಲಿ ಸಿನಿಯರ್ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿ ತನ್ನ ಕನಸು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಯುವಕನ ಸಾಧನೆಗೆ ಪೋಷಕರು, ಗ್ರಾಮಸ್ಥರು ದಿಲ್ ಖುಷ್ ಆಗಿದ್ದಾರೆ.
ʼನಾನು ಪ್ರತಿನಿತ್ಯ ಗ್ರಂಥಾಲಯಕ್ಕೆ ತೆರಳಿ ಸುಮಾರು 8 ಗಂಟೆಗಳ ಕಾಲ ಅಧ್ಯಯನ ನಡೆಸುತ್ತಿದ್ದೆ. ಸರ್ಕಾರಿ ನೌಕರಿಗಾಗಿ ಯಾವುದೇ ಅರ್ಜಿ ಹಾಕಲಿಲ್ಲ. ಸಿಎ ಕೋರ್ಸ್ ಓದುವಾಗ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದೇನೆ. ನನ್ನನ್ನು ನೌಕರಿಗೆ ಆಯ್ಕೆ ಮಾಡಿದ್ದಾರೆ. ವಿದೇಶದಲ್ಲಿ ಉತ್ತಮ ಸಂಬಳದ ನೌಕರಿ ಜೊತೆಗೆ ಎಲ್ಲ ಸೌಲಭ್ಯ ದಕ್ಕಿರುವುದು ತುಂಬಾ ಸಂತಸ ತಂದಿದೆ. ವಾರದೊಳಗೆ ನೌಕರಿಗೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ʼಈದಿನʼಕ್ಕೆ ತಿಳಿಸಿದ್ದಾರೆ.
ʼಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಜನರ ಅರಿವಿನ ಸಾಮರ್ಥ್ಯವನ್ನು, ಬೌದ್ಧಿಕ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅರಿವು ಕೇಂದ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸುವ ಮುಖಾಂತರ ಕಲಿಕೆಯ ಹಸಿವಿರುವವರಿಗೆ ಸಾಧನಾ ಕೇಂದ್ರಗಳಾಗಿವೆ. ಡಿಜಿಟಲ್ ಸಲಕರಣೆಗಳು, ಪುಸ್ತಕಗಳು ಸೇರಿದಂತೆ ಎಲ್ಲವನ್ನೂ ಒದಗಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅರಿವಿನ ದಾಸೋಹ ಒದಗಿಸುವುದು ನಮ್ಮ ಗುರಿ. ಹೀಗಾಗಿ ಗ್ರಾಮೀಣ ಭಾಗದಲ್ಲಿರುವ ಡಿಜಿಟಲ್ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕುʼ ಎಂದು ವಿನೋದ ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ಹುಡುಗ ವಿದೇಶದಲ್ಲಿ ನೌಕರಿ ಪಡೆದಿರುವುದು ಅತೀವ ಸಂತೋಷ ನೀಡಿದೆ. ಗ್ರಾಮ ಪಂಚಾಯತ್‌ನಲ್ಲಿರುವ ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿ ಸಾಧನೆಗೆ ಪೂರಕವಾಗಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಹೆಚ್ಚಿನ ಅಧ್ಯಯನಕ್ಕೆ ಬೇಕಾಗುವ ಸಾಮಾಗ್ರಿಗಳು ಗ್ರಂಥಾಲಯದಲ್ಲಿದ್ದು, ಇದರ ಸದುಪಯೋಗಪಡಿದುಕೊಳ್ಳಬೇಕು ಎಂದು ಧುಪತಮಹಾಗಾಂವ್ ಗ್ರಾಮ ಪಂಚಾಯತ್‌ನ ಅಧಿಕಾರಿಗಳು, ಸಿಬ್ಬಂದಿ ಹೇಳುತ್ತಾರೆ.
ಇದನ್ನೂ ಓದಿ : ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ
ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀಬಾಯಿ ನಾಗನಾಥ ವಗ್ಗೆ, ಪಿಡಿಒ ಸುನೀತಾ, ಗ್ರಂಥಾಲಯ ಪಾಲಕ ಶಿವರಾಜ ಪಾಂಚಾಳ ಸೇರಿದಂತೆ ಗ್ರಾಮಸ್ಥರು ವಿದ್ಯಾರ್ಥಿಗೆ ಸನ್ಮಾನಿಸಿದರು.