ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯದ ಮೇರು ಪರ್ವತವಾಗಿ ಬೆಳೆದ ಸಾಹಿತಿ ಶಾಂತರಸ ಅವರು ಸಮಕಾಲಿನ ಬರಹಗಾರರಿಗೆ ಆದರ್ಶ ವ್ಯಕ್ತಿಯಾಗಿದ್ದರು. ಗಜಲ್ ಕವಿಯಂದೇ ಖ್ಯಾತರಾಗಿದ್ದ ಅವರು ಬಂಡಾಯ ಮನೋಧರ್ಮ ಮೈಗೂಡಿಸಿಕೊಂಡು ಸಾಹಿತ್ಯದಲ್ಲಿ ನೆಲದ ಸತ್ವ ಎತ್ತಿ ಹಿಡಿದಿದ್ದರು ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ತಿಳಿಸಿದರು.
ಬೀದರ್‌ನ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಭಾಲ್ಕಿಯ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಸಂಸ ಥಿಯೇಟರ್ ಬೆಂಗಳೂರು ಇವರ ಸಹಯೋಗದಲ್ಲಿ ಭಾನುವಾರ ಸಂಜೆ ಬೀದರ್ ನಗರದ ಕೃಷ್ಣಾ ರಿಜೆನ್ಸಿ ಸಭಾಂಗಣದಲ್ಲಿ ಏರ್ಪಡಿಸಿದ ಗಜಲ್ ಕವಿ ಶಾಂತರಸ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ -ಶಾಂತರಸ-100′ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಾಹಿತಿ ಸ್ನೇಹಲತಾ ಗೌನಳ್ಳಿ ಅವರು ಶಾಂತರಸರ ʼಬದುಕು ಮತ್ತು ಬರಹʼ ಕುರಿತು ಮಾತನಾಡಿ, ʼಶಾಂತರಸರು ಸಾಹಿತ್ಯಕ್ಕೆ ನೀಡಿದ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ʼನಾಯಿ ಮತ್ತು ಪಿಂಚಣಿ, ಸ್ವಾತಂತ್ರ‍್ಯ ವೀರ, ಉರಿದ ಬದುಕು ಎಂಬ ಕಥಾ ಸಂಕಲನಗಳ ಮೂಲಕ ಕರ್ನಾಟಕದ ಮಂಟೋ ಆಗಿದ್ದಾರೆ. ಉರ್ದು ಭಾಷೆಯಲ್ಲಿ ಮೂಡಿಬಂದ ಗಜಲ್ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಭಾಗವಾಗಿ ಮಾಡಿದ ಶ್ರೇಯಸ್ಸು ಶಾಂತರಸರಿಗೆ ಸಲ್ಲುತ್ತದೆ, ಅನ್ಯಾಯದ ವಿರುದ್ಧ ಹೋರಾಡಿದ ಅವರು ಹೈದರಾಬಾದ ಕರ್ನಾಟಕದ ಲೇಖಕರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಸ್ಥಾನಮಾನಕ್ಕಾಗಿ ಶ್ರಮಿಸಿದರುʼ ಎಂದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ʼಶರಣರ ನಿರ್ಭೀತ ಮನೋಧರ್ಮವನ್ನು ಜೀವನದ ಉಸಿರಾಗಿಸಿಕೊಂಡಿದ್ದ ಶಾಂತರಸರು ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿದ್ದು ಮಠದ ಪರಂಪರೆಯಲ್ಲಿ ಬೆಳೆದವರು. ಶ್ರೇಷ್ಠ ಸಾಹಿತಿಯಾಗಿ ನಾಡಿನಾದ್ಯಂತ ಕೀರ್ತಿ ತಂದಿದ್ದು ಜಿಲ್ಲೆಯ ಹಿರಿಮೆ. ಭಾಲ್ಕಿ ಹಿರೇಮಠದೊಂದಿಗೆ ಅವರ ಸಂಬಂಧ ಅನೂನ್ಯವಾಗಿತ್ತುʼ ಎಂದು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಅಲ್ಲೂರೆ ಮಾತನಾಡಿ, ʼಮಾನವೀಯತೆಯ ಪ್ರತಿಪಾದಕರಾಗಿದ್ದ ಶಾಂತರಸರು ಪುಸ್ತಕ ಪ್ರೇಮದ ಜೊತೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳು ಅವರಲ್ಲಿ ನಿರಂತರವಾಗಿ ಅಭಿವ್ಯಕ್ತಿ ರೂಪ ಪಡೆಯುತ್ತಿದ್ದವುʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, ʼಕಲ್ಯಾಣ ಕರ್ನಾಟಕ ಭಾಗದ ಸಾಹಿತಿಯೊಬ್ಬರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ಆಯೋಜಿಸಿರುವುದು ವಿಶೇಷ. ಇಡೀ ಕನ್ನಡ ನಾಡು ಶಾಂತರಸರಿಗೆ ಗೌರವ ಸಲ್ಲಿಸಿದ್ದು ಉತ್ತಮ ಬೆಳವಣಿಗೆ. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಈ ರೀತಿಯಾಗಿ ಮಾಡುವುದರಿಂದ ಕನ್ನಡಿಗರೆಲ್ಲರೂ ಒಗ್ಗೂಡಿದ್ದೇವೆ ಎಂಬ ಸಂದೇಶ ನೀಡಿದಂತಾಗುತ್ತದೆʼ ಎಂದು ತಿಳಿಸಿದರು.
ಶಬನಮ್ ಏಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮಕ್ತುಂಬಿ ಎಂ.ಪ್ರಾಸ್ತಾವಿಕವಾಗಿ ಮಾತನಾಡಿ, ʼಬೀದರ ಜಿಲ್ಲೆಯೊಂದಿಗೆ ಶಾಂತರಸರ ಅವಿನಾಭಾವ ಸಂಬಂಧವಿತ್ತು. ಬೀದರ್‌ನಲ್ಲಿ ಜರುಗಿದ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾದ ಇವರ ಜನ್ಮ ಶತಮಾನೋತ್ಸವ ಸಮಾರಂಭ ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆʼ ಎಂದು ತಿಳಿಸಿದರು.
ಅನಿಲಕುಮಾರ್ ದೇಶಮುಖ, ಸಾಹಿತಿಗಳಾದ ಡಾ. ರಾಮಚಂದ್ರ ಗಣಾಪುರ್, ಡಾ.ಸುನೀತಾ ಕೂಡ್ಲಿಕರ್ ಸೇರಿದಂತೆ ಮತ್ತಿತರರಿದ್ದರು.
ಕವಿಗಳಾದ ಮಲ್ಲೇಶ್ವರಿ ಉದಯಗಿರಿ, ಡಾ.ಗೌತಮ್ ಬಕ್ಕಪ್ಪ, ವಿಜಯಕುಮಾರ್ ಗೌರೆ, ಕುಸುಮ ಹತ್ಯಾಳ್, ಧನಲಕ್ಷ್ಮಿ ಪಾಟೀಲ್ ಹಲಸಿ, ಡಾ.ಶ್ರೇಯಾ ಮಹಿಂದ್ರಕರ, ಧನರಾಜ ಅಣಕಲೆ, ವಿದ್ಯಾವತಿ ಹಿರೇಮಠ, ರವಿದಾಸ ಕಾಂಬಳೆ ಅವರು ಸ್ವರಚಿತ ಗಜಲ್ ವಾಚಿಸಿದರು. ಶಾಂತಮ್ಮ ಬಲ್ಲೂರ, ಸುನಿತಾ ಬಿರಾದಾರ, ಸ್ವರೂಪರಾಣಿ ನಾಗೂರೆ, ಸರೀತಾ ಬೇಬಿ, ದಿಲೀಪಕುಮಾರ ಮೋಘ, ಸರಿತಾ ಹುಡುಗಿಕರ, ಡಾ.ಸುನಿತಾ ಸೂರ್ಯವಂಶಿ, ಪ್ರೀಯಾಂಕ ಹೆಚ್.ಪಿ. ಅವಿನಾಶ ಸೋನೆ, ಪವನಕುಮಾರ ಬಾಲೇರ ಶಾಂತರಸರು ಬರೆದ ಗಜಲ್ ವಾಚನ ಮಾಡಿದರು.
ಈ ಸುದ್ದಿ ಓದಿದ್ದೀರಾ? Second PUC Result | ಪಿಯುಸಿ ಫಲಿತಾಂಶ : 19 ರಿಂದ 22ನೇ ಸ್ಥಾನಕ್ಕೆ ಕುಸಿದ ಬೀದರ್
ನಿತ್ಯಪ್ರಿಯ ಸಂಗೀತಾ ಅಕಾಡಮಿ ಕಲಾವಿದರು ನಾಡಗೀತೆ ನಡೆಸಿಕೊಟ್ಟರು. ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ನಾಗರಾಜ ಬುಳ್ಳಾ, ವೈಜಿನಾಥ ಬಾಬಶೆಟ್ಟೆ ಗಜಲ್ ಗಾಯನ ನಡೆಸಿದರು. ಅಜಿತ ಎನ್.ನೇಳಗೆ ಸ್ವಾಗತಿಸಿದರು, ಪ್ರೇಮ ಅವಿನಾಶ ನಿರೂಪಿಸಿದರು, ಲಕ್ಷ್ಮಣ ಮೇತ್ರೆ ವಂದಿಸಿದರು.