ಇವತ್ತಿನ ಸಂದರ್ಭದಲ್ಲಿ ನಿಸ್ವಾರ್ಥ ಭಾವದಿಂದ ಸಮಾಜ ಸೇವೆ ಮಾಡುವವರ ಸಂಖ್ಯೆ ಅಪರೂಪ. ಅದರಲ್ಲೂ ಇಂದಿನ ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಎಂದರೆ ತುಂಬಾ ವಿರಳ. ವಸ್ತುಸ್ಥಿತಿ ಹೀಗಿರುವಾಗ, ಬೀದರ್ ನಗರದಲ್ಲಿ 30 ವರ್ಷದ ಆಸುಪಾಸಿನ ಸಮಾನ ಮನಸ್ಕರ ʼರಿಶೈನ್ʼ ತಂಡವೊಂದು ಬಡವರು, ನಿರ್ಗತಿಕರು, ಅನಾಥರು ಹಾಗೂ ವೃದ್ಧರಿಗೆ ಅನ್ನ ವಿತರಿಸಿ ಹೊಟ್ಟೆ ತಣಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಳೆದ ಆರೇಳು ವರ್ಷಗಳಿಂದಲೂ ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಬೀದರ್ ನಗರದಲ್ಲಿ ನಿತ್ಯ ನಡೆಯುವ ಸಭೆ-ಸಮಾರಂಭ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಆಹಾರ ಉಳಿದರೆ, ಅದನ್ನು ಸಂಗ್ರಹಿಸಿ ಹಸಿದವರಿಗೆ ಪೂರೈಸಿ ಹಸಿವು ನೀಗಿಸುವ ಮಾನವೀಯ ಕೆಲಸವನ್ನು ರಿಶೈನ್ ಸಂಸ್ಥೆಯ ಯುವ ಪಡೆ ಮಾಡಿಕೊಂಡು ಬರುತ್ತಿದ್ದಾರೆ. ಅನ್ನದ ಬೆಲೆ ಗೊತ್ತಿಲ್ಲದೆ ಕಾರ್ಯಕ್ರಮಗಳಲ್ಲಿ ಯಥೇಚ್ಛವಾಗಿ ವ್ಯರ್ಥವಾಗುವ ಆಹಾರ ಪದಾರ್ಥಗಳನ್ನು ಬಹುತೇಕರು ತಿಪ್ಪೆಗೆ ಎಸೆಯುತ್ತಾರೆ. ಹೀಗಾಗಿ ರಿಶೈನ್ ತಂಡದವರು ʼಡೋಂಟ್ ವೇಸ್ಟ್ ಫುಡ್ʼ ಎಂಬ ಘೋಷವಾಕ್ಯದೊಂದಿಗೆ ಅನ್ನದ ಮಹತ್ವ ತಿಳಿಸಿ, ಅದನ್ನು ಸಂಗ್ರಹಿಸಿ ಹಸಿವಿನಿಂದ ಬಳಲಿದವರಿಗೆ ಹೊಟ್ಟೆ ತುಂಬಿಸಿ ಸಂಭ್ರಮ ಪಡುತ್ತಾರೆ.
ಇದಿಷ್ಟೂ ರಿಶೈನ್ ಸಂಸ್ಥೆಯ ವಿವರಣೆ ಓದಿದವರಿಗೆ – ಈ ರಿಶೈನ್ ಸಂಸ್ಥೆ ಯಾರು ಕಟ್ಟಿದರು? ಅವರ ಹಿನ್ನೆಲೆ ಏನು? ಯಾವುದೋ ಕಂಪನಿಯಲ್ಲಿ ನೌಕರಿ ಮಾಡಬೇಕಾದ ಪದವೀಧರ ಯುವಕ ಈ ವಯಸ್ಸಿನಲ್ಲಿ ಈತ ವ್ಯಾನ್‌ನಲ್ಲಿ ಸುತ್ತಾಡಿ ಊಟ ಸಂಗ್ರಹಿಸಿ ಹಂಚುತ್ತಾ ಬದುಕುತ್ತಿರುವುದಾದರೂ ಏಕೆ? ಈ ವಿಶಿಷ್ಟ ರೀತಿಯ ಸಮಾಜ ಸೇವೆಗೆ ಕಾರಣವಾದ ಸಂದರ್ಭವಾದರೂ ಯಾವುದು? ಇವರಿಗೆ ಊಟ ಸಿಗುವುದಾದರೂ ಎಲ್ಲಿ ಹೇಗೆ? ಊಟ ಯಾರಿಗೆ ಹಂಚುವ ಜೊತೆಗೆ ಇನ್ನೂ ಏನು ಮಾಡ್ತಾರೆ ಎಂಬಂಥ ಪ್ರಶ್ನೆಗಳು ಕಾಡುವುದು ಸಹಜ. ಇಂಥ ಪ್ರಶ್ನೆಗಳಿಗೆ ರಿಶೈನ್ ಸಂಸ್ಥೆಯ ಸ್ಥಾಪಕ ರೋಹನ್ ಕುಮಾರ್ ಯಾವುದೇ ಸಂಕೋಚವಿಲ್ಲದೆ ತನ್ನ ಬದುಕಿನ ಕಥೆ ಹೇಳಿಕೊಂಡರು.

ಬೀದರ್ ನಗರದಲ್ಲಿ ʼರಿಶೈನ್ʼ ರೋಹನ್ ಎಂಬ ಹೆಸರಿನಿಂದಲೇ ಕರೆಸಿಕೊಳ್ಳುವ ಇವರ ಹೆಸರು ರೋಹನ್ ಕುಮಾರ್. ಬೀದರಿನ ಮಂಗಲಪೇಟ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಪದವೀಧರಾದ ರೋಹನ್ ಪಿಯುಸಿ ಓದುವಾಗಲೇ ಸಮಾಜ ಸೇವೆ ಬಗ್ಗೆ ಒಲವು ಹುಟ್ಟಿಕೊಂಡಿತ್ತು. ಸಮಾಜದಲ್ಲಿ ಜಾತಿಯತೆ ಭೀಕರವಾಗಿದೆ. ಇದರಿಂದ ಮೇಲು-ಕೀಳು ಎಂದಿಗೂ ಹೋಗುವುದಿಲ್ಲ ಎಂಬ ಸಹಪಾಠಿಗಳ ಮಾತು ಆಲಿಸುತ್ತಿದ್ದ ರೋಹನ್‌ಗೆ ʼಜಾತಿ, ಧರ್ಮ ಯಾವುದೇ ಇರಲಿ, ಎಲ್ಲರೂ ಮನುಷ್ಯರು ತಾನೇ, ಮತ್ತೇಕೆ ಈ ಭೇದ-ಭಾವ. ಈ ಜಾತಿ ತಾರತಮ್ಯ ಮುಂದುವರೆದರೆ ಸಮಾಜದಲ್ಲಿ ಬಡವರ, ನಿರ್ಗತಿಕರ, ನೊಂದವರ ನೋವಿಗೆ ಯಾರು ಸ್ಪಂದಿಸಬೇಕು ಎಂಬ ಪ್ರಶ್ನೆಗಳು ಕಾಡತೊಡಗಿದ್ದವು. ಅಂದಿನಿಂದಲೇ ಸಮಾಜದಲ್ಲಿ ಸಹಬಾಳ್ವೆ, ಪ್ರೀತಿ ಹಾಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಏನಾದರೂ ಮಾನವೀಯ ಕಾರ್ಯ ಮಾಡೋಣ ಎಂದು ಅಂದಿನಿಂದಲೇ ಸಣ್ಣಪುಟ್ಟ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸ್ವಾರಸ್ಯಕರ ಸಂಗತಿ ಏನೆಂದರೆ ಪದವಿ ಮುಗಿಸಿದ ಬಳಿಕ ಯಾವುದೇ ನೌಕರಿ ಹಿಡಿಯದೇ ಸಮಾಜ ಸೇವೆಯೇ ನನ್ನ ಧ್ಯೇಯ ಎಂದು ಪಣತೊಟ್ಟಿದ್ದಾರೆ. ಕುಟುಂಬ ನಿರ್ವಹಣೆ, ಮುಂದಿನ ಬದುಕು ವಿಷಯವಾಗಿ ಯಾವುದೇ ಯೋಚನೆಯಿಲ್ಲದೆ ಮಾನವೀಯ ಕಾರ್ಯದಲ್ಲಿ ತೊಡಗಿರುವ ರೋಹನ್ ಮುಂದೆ ಬಡವರು, ಅನಾಥರಿಗೆ ಹಾಗೂ ಅಲೆಮಾರಿಗಳಿಗೆ ಆಹಾರ ವಿತರಿಸುವ ಕೆಲಸಕ್ಕೆ ಮುಂದಾದರಲ್ಲ: ಇಂತಹದೊಂದು ಕೆಲಸಕ್ಕೆ ಪ್ರೇರಣೆಯಾದ ಒಂದೆರಡು ಘಟನೆಗಳು ಇಲ್ಲಿವೆ.
ನಾನ್ನೊಮ್ಮೆ ಬೀದರ್ ರೈಲ್ವೆ ನಿಲ್ದಾಣದಿಂದ ಮನೆಗೆ ಹೋಗುವಾಗ ಚಿಂದಿ ಆಯುವ ಇಬ್ಬರು ಮಕ್ಕಳು ಕಸದ ಬುಟ್ಟಿಯಲ್ಲಿ ಸುರಿದಿದ್ದ ಆಹಾರವನ್ನು ಹೆಕ್ಕಿ ತಿನ್ನುತ್ತಿದ್ದ ದೃಶ್ಯ ಕಂಡು ಮನಸ್ಸಿಗೆ ಬಹಳ ಘಾಸಿಯಾಯಿತು. ಆದಾದ ಕೆಲ ದಿನಗಳ ಬಳಿಕ ಒಂದು ಕಾರ್ಯಕ್ರಮದಲ್ಲಿ ಯಥೇಚ್ಛವಾಗಿ ಹೆಚ್ಚಾದ ಆಹಾರ ಚೆಲ್ಲಿದನ್ನು ಕಣ್ಣಾರೆ ಕಂಡಿದ್ದೆ. ಈ ಎರಡೂ ಘಟನೆಗಳು ತುಂಬಾ ಬೇಸರ ತಂದವು. ಒಂದೆಡೆ ಆಹಾರ ಸಿಗದೆ ಮಕ್ಕಳು ತಿಪ್ಪೆಗೆ ಎಸೆದ ಅನ್ನಕ್ಕೆ ಕೈಹಾಕುತ್ತಿದ್ದಾರೆ, ಇನ್ನೊಂದೆಡೆ ನೂರಾರು ಜನರ ಹಸಿವು ನೀಗಿಸುವ ಅನ್ನ ವ್ಯರ್ಥವಾಗುತ್ತಿದೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ಕಂಡ ನನಗೆ ತಿಪ್ಪಿಗೆ ಎಸೆಯುವ ಆಹಾರವನ್ನು ಹಸಿದವರಿಗೆ ತಲುಪಿಸಿದರೆ ನೂರಾರು ಜನರ ಹೊಟ್ಟೆ ತುಂಬುತ್ತದೆ. ಅನ್ನದ ಮಹತ್ವ ಸಾರಿ ಹೇಳಿದಂತೆ ಆಗುತ್ತದೆ ಎಂದು ಅಂದೇ ನಿರ್ಧರಿಸಿ ಸ್ನೇಹಿತರೊಂದಿಗೆ ಕೂಡಿ ʼರಿಶೈನ್ ಸಂಸ್ಥೆʼ ಆರಂಭಿಸಿದ್ದೆವು ಎನ್ನುತ್ತಾರೆ.
ಹೀಗೆ, 2017ರಲ್ಲಿ ರೋಹನ್ ಕಟ್ಟಿದ ರಿಶೈನ್ ಸಂಸ್ಥೆಯಲ್ಲಿ ಅವರೊಂದಿಗೆ ಶ್ರೀಧರ್, ಸಚಿನ್ ಕೆಂಚಾ, ಸ್ಟೀಫನ್ ಪೌಲ್, ಪುಟ್ಟರಾಜು, ಸಿಮೋನ್, ಕಾರ್ತಿಕ ಆಲೂರೆ ಸೇರಿದಂತೆ 10-15 ಪದವೀಧರ ಯುವ ಸಮಾನ ಮನಸ್ಕರ ತಂಡ ತಮ್ಮ ದೈನಂದಿನ ಕೆಲಸದ ಮಧ್ಯೆಯೂ ಮಾನವೀಯ ಕಳಕಳಿ ಇಟ್ಟುಕೊಂಡು ʼಅನ್ನ ಹಂಚುವʼ ಕಾಯಕ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ವಾರಿಯರ್ ಅನೇಕ ಕಡುಬಡವರಿಗೆ, ನಿರ್ಗತಿಕರಿಗೆ ಹೊಟ್ಟೆ ತಣಿಸುವ ಜೊತೆಗೆ ಅಗತ್ಯ ಇರುವವರಿಗೆ ಆರ್ಥಿಕ ಸಹಾಯಧನ ಒದಗಿಸಿದ್ದಾರೆ.

ಬೀದರ್ ನಗರದಲ್ಲಿ ಸುಮಾರು 80ಕ್ಕೂ ಅಧಿಕ ಕಲ್ಯಾಣ ಮಂಟಪಗಳಿವೆ. ನಿತ್ಯ ಜರುಗುವ ಮದುವೆ, ಸಭೆ-ಸಮಾರಂಭ, ತೊಟ್ಟಿಲು, ಸಾಹಿತ್ಯ-ಸಾಂಸ್ಕೃತಿಕ ಹೀಗೆ ಕಲ್ಯಾಣ ಮಂಟಪ, ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಆಹಾರ ಹೆಚ್ಚಾದರೆ ರಿಶೈನ್ ಸಂಸ್ಥೆಯವರಿಗೆ ಸಂಪರ್ಕಿಸುತ್ತಾರೆ. ರಿಶೈನ್ ಆರಂಭದ ದಿನಗಳಲ್ಲಿ ಸಂಗ್ರಹಿಸಿದ ಆಹಾರ ಹಸಿದವರಿಗೆ ಪೂರೈಸಲು ವಾಹನ ಇರಲಿಲ್ಲ. ಆಗ ಸ್ವಂತ ದುಡ್ಡುನಿಂದ ಆಟೊ, ಟ್ರಾಲಿ ಮೂಲಕ ಸಾಗಿಸಿ ಹಸಿದವರಿಗೆ ಆಹಾರ ಹಂಚುತ್ತಿದ್ದರು. 2020ರಲ್ಲಿ ಕಲಬುರಗಿ ಮೂಲದ ದಾನಿಗಳೊಬ್ಬರು ಉಚಿತವಾಗಿ ಓಮಿನಿ ವಾಹನ ಕಾಣಿಕೆಯಾಗಿ ನೀಡಿದ್ದರಿಂದ ಆಹಾರ ಸಾಗಾಟಕ್ಕೆ ಅನುಕೂಲವಾಗಿದೆ.
ಬೀದರ್ ಸಿಟಿಯಲ್ಲಿ ಎಲ್ಲೇ ಅನ್ನ ಉಳಿದಿದೆ ಎಂದು ಕರೆ ಮಾಡಿದರೆ ಅಲ್ಲಿಗೆ ದೊಡ್ಡ ಗಾತ್ರದ ಕ್ಯಾನ್‌ಗಳೊಂದಿಗೆ ರಿಶೈನ್ ವ್ಯಾನ್ ಹೊರಡುತ್ತದೆ. ಸ್ವತಃ ಇವರೇ ಕ್ಯಾನ್‌ನೊಳಗೆ ತುಂಬಿಕೊಂಡು ತಂದು ಬಿಸಿಯಿರಲಿ ಎಂದು ಪ್ಯಾಕೆಟ್‌ಗಳಲ್ಲಿ ಹಾಕುತ್ತಾರೆ. ಮತ್ತೆ ಅದನ್ನು ನಗರದ ಅಲೆಮಾರಿಗಳಿಗೆ, ಬ್ರಿಮ್ಸ್ ಆಸ್ಪತ್ರೆ, ರೈಲ್ವೆ, ಬಸ್ ನಿಲ್ದಾಣ ಸೇರಿದಂತೆ ಬೀದಿಯಲ್ಲಿನ ಅನಾಥರಿಗೆ ಹಂಚುತ್ತಾರೆ. ʼನಿಮ್ಮಲ್ಲಿ ಏನಾದರೂ ಕಾರ್ಯಕ್ರಮ ಮಾಡಿದರೆ ಅಂದು ಉಳಿದಿರುವ ಅನ್ನವನ್ನು ಯಾರೂ ಎಸೆಯಬೇಡಿ. ದಯವಿಟ್ಟು ನಮಗೆ ಕೊಡಿ. ಆ ಅನ್ನದಿಂದ ಬಡವರು ಹಾಗೂ ನಿರ್ಗತಿಕರ ಹೊಟ್ಟೆ ತಣಿಸೋಣ. ಯಾವತ್ತಾದ್ರೂ ಅನ್ನ ಹೆಚ್ಚಾದರೆ ದಯವಿಟ್ಟು ನಮಗೆ ಒಂದು ಫೋನ್ ಮಾಡಿ. ನಾವೇ ಬಂದು ಸಂಗ್ರಹಿಸಿಕೊಂಡು ಹೋಗುತ್ತೇವೆ’ ಎಂದು ʼರಿಶೈನ್ʼ ಸಂಸ್ಥೆ ಯುವಕರು ಹೋದಲ್ಲಿ, ಬಂದಲ್ಲಿ ನಂಬರ್ ಬರೆದುಕೊಟ್ಟು ಮನವಿ ಮಾಡಿಕೊಳ್ಳುತ್ತಾರೆ.
ʼಅನ್ನ ಎಸೆದರೆ ಕಸ, ಅದೇ ಅನ್ನ ಹೊಟ್ಟೆಗೆ ಹಾಕಿದರೆ ಜೀವ ಉಳಿಸುವ ಸಾಧನʼ ಆಗುತ್ತದೆ. ಆಹಾರ ಹಾಳು ಮಾಡಿದ್ರೆ ಒಂದು ಜೀವ ಹಸಿವಿನಿಂದ ಉಳಿಸಿದ ಹಾಗೆ ಎಂಬ ಆಶಯ. ಆದರೆ, ಎಲ್ಲ ಕಡೆಯಿಂದ ಸಂಗ್ರಹಿಸಿದ ಆಹಾರ ತಂದ ಬಳಿಕ ತಾವು ಮೊದಲು ಸೇವಿಸಿದ ಬಳಿಕವೇ ಇನ್ನೊಬರಿಗೆ ಹಂಚುತ್ತೇವೆ. ಇದು ಆದಾಯದ ಕೆಲಸ ಅಲ್ಲವೇ ಅಲ್ಲ. ಹಸಿವಿನ ಬಾಧೆ ಮತ್ತು ಅದರ ಪರಿಣಾಮ ಎಲ್ಲರಿಗೂ ಗೊತ್ತಿದೆ. ಹಸಿವಿನಿಂದ ಕಂಗೆಟ್ಟಿದ್ದ ಜನರ ಮೂಕ ವೇದನೆ ತೀರಾ ಸಂಕಟದಿಂದ ಕೂಡಿದೆ. ಅದನ್ನು ತೊಡೆದು ಹಾಕಲು ಕೈಜೋಡಿಸಬೇಕು. ಸಮಾಜದಲ್ಲಿ ʼಪ್ರೀತಿ ಮತ್ತು ಆರೈಕೆʼ ಹೆಸರಿನಲ್ಲಿ ನಮ್ಮ ಉದ್ದೇಶ ಎಂದು ರಿಶೈನ್ ತಂಡದ ಶ್ರೀಧರ್ ಹೇಳುತ್ತಾರೆ.
ಸರ್ಕಾರದ ಆರ್ಥಿಕ ನೆರವು, ಅನುದಾನ ಲಭ್ಯವಿಲ್ಲದಿದ್ದರೂ ರಿಶೈನ್ ಸಂಸ್ಥೆ ವಾಹನಕ್ಕೆ ಸ್ವತಃ ಹಣದಿಂದ ಡಿಸೇಲ್ ಹಾಕಿಸಿ ಅನ್ನ ಹಂಚುವ ಕಾಯಕ ಮುಂದುವರಿಸಿದ್ದಾರೆ. ಸ್ವಂತ ಹಣದಿಂದ ಕ್ಯಾನ್ ಖರೀದಿಸಲಾಗಿದೆ, ಆಹಾರ ಬಿಸಿಯಿರಲಿ ಎಂದು ಪ್ಯಾಕೆಟ್‌ಗಳಲ್ಲಿ ಹಾಕಿ ಕೊಡಲಾಗುತ್ತದೆ. ಹೀಗೆ ಹಲವು ಖರ್ಚುಗಳು ಎಲ್ಲರೂ ಕೂಡಿ ಭರಿಸುತ್ತಿದ್ದೇವೆ. ಈಗ ನಾವು ಸೀಮಿತವಾಗಿ ಕೆಲಸ ಮಾಡುತ್ತಿದ್ದೇವೆ. ಒಮ್ಮೊಮ್ಮೆ ಅನೇಕ ಕರೆಗಳು ಬಂದರೂ ಕೆಲಸದ ಒತ್ತಡದಲ್ಲಿ ಹೋಗಲು ಆಗುವುದಿಲ್ಲ. ಈ ಕೆಲಸ ದೊಡ್ಡ ಮಟ್ಟದಲ್ಲಿ ಮಾಡಬೇಕಾದರೆ ಬಂಡವಾಳದ ಅಗತ್ಯವಿದೆ. ಅದಕ್ಕೆ ʼಮ್ಯಾನ್ ಪವರ್ʼ ಜೊತೆಗೆ ಆಹಾರ ಸಂಗ್ರಹಣೆ ಕೇಂದ್ರ ಅಗತ್ಯವಿದೆ. ಹೀಗಾಗಿ ಕಾರ್ಪೊರೇಟ್ ಕಂಪನಿಗಳು ಸಿಎಸ್‌ಆರ್ ಅಡಿ ಹಣ ಮೀಸಲಿಟ್ಟರೆ ಇನ್ನಷ್ಟು ಕೆಲಸ ಮಾಡಲು ಸಹಾಯವಾಗುತ್ತದೆ. ಸರ್ಕಾರ ಹಸಿವು ನೀಗಿಸಲು ಹೊಸ ಯೋಜನೆ ಜಾರಿಗೆ ತರಬೇಕು ಎಂಬುದು ರೋಹನ್ ಅವರ ಅಭಿಮತ.
ರಿಶೈನ್ ಸಂಸ್ಥೆಯ ಅಧ್ಯಕ್ಷ ರೋಹನ್ ಅವರು ಹೊಟ್ಟೆ ತಣಿಸುವ ಕಾರ್ಯದೊಂದಿಗೆ ಗ್ರಾಮೀಣ ಭಾಗದ ವಯೋವೃದ್ಧರು, ನಿರ್ಗಗತಿಕರು, ವಿಧವೆಯವರು ಮಸಾಶನ, ವಿಧವಾ ವೇತನ ಸೇರಿದಂತೆ ಹಣದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಕೈಲಾದಷ್ಟು ಸಹಾಯಧನ ಒದಗಿಸುವುದು. ಸ್ನೇಹಿತರ ಬರ್ತಡೇ, ಮದುವೆ ವಾರ್ಷಿಕೋತ್ಸವ ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಬದಲು ಬಡ ಮಕ್ಕಳಿಗೆ ಆರ್ಥಿಕ ಸಹಕಾರ, ಆಹಾರ, ಪುಸ್ತಕ ಸಾಮಾಗ್ರಿ ವಿತರಣೆ ಕಾರ್ಯ ಮೂಲಕ ಸಾಮಾಜಿಕ ಬದಲಾವಣೆ ಬಯಸುತ್ತಾರೆ. ಅಲ್ಲದೇ ಇತ್ತೀಚೆಗೆ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಉಚಿತವಾಗಿ ಸ್ವೇಟರ್, ಬಟ್ಟೆ ವಿತರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಸಮಾಜದಲ್ಲಿ ಹತ್ತು ಜನಕ್ಕೆ ಒಳಿತಾಗುವಂಥ ಯಾವುದಾದರೂ ಕೆಲಸ ಮಾಡ್ತಾ ಇರಬೇಕು ಎನ್ನುತ್ತಾರೆ. ಜಾತಿ, ಧರ್ಮ, ಬಡವ, ಶ್ರೀಮಂತ, ಮೇಲು-ಕೀಳು ಎನ್ನದೆ ನಾವೆಲ್ಲರೂ ಮನುಷ್ಯರು ಎಂಬ ಭಾವದೊಂದಿಗೆ ಕೆಲಸ ಮಾಡಬೇಕೆಂಬ ಆಸೆ ನನ್ನದು. ರಿಶೈನ್ ಸಂಸ್ಥೆಯ ಆಹಾರ ಪಡೆದವರು ʼನೀವು ತಿಂಗಳಲ್ಲಿ ಅನೇಕ ಬಾರಿ ಕೊಟ್ಟ ಆಹಾರದಿಂದ ನಮ್ಮ ಮನೆಯ ಒಂದಿಷ್ಟು ಖರ್ಚು ಉಳಿತಾಯವಾಗಿದೆ. ಅದೇ ಉಳಿತಾಯ ಹಣದಿಂದ ನನ್ನ ಮಕ್ಕಳ ಶಾಲೆ ಶುಲ್ಕ ಕಟ್ಟಿದ್ದೇನೆ, ಅದರಿಂದ ಕುಟುಂಬ ನೆಮ್ಮದಿಗೂ ಕಾರಣವಾಗಿದೆʼ ಎಂದು ಹೇಳ್ತಾರಲ್ಲ; ಅವೆಲ್ಲಾ ನನ್ನ ಬದುಕಿನ ಸಾರ್ಥಕ ಕ್ಷಣಗಳು ಎಂದು ರೋಹನ್ ಮುಗುಳ್ನಗುತ್ತಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆನ್‌ಲೈನ್ ಜೂಜಿನಲ್ಲಿ ₹80 ಲಕ್ಷ ಹಣ ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ
ಈ ಸಂಸ್ಥೆಯ ಕೆಲಸವನ್ನೆಲ್ಲ ಗಮನಿಸಿದ ಒಬ್ಬರು ವಾಹನ ಕೊಟ್ಟಿದ್ದಾರೆ, ಕೆಲ ನಾಗರಿಕರು ಆರ್ಥಿಕ ದೇಣಿಗೆ ಕೊಟ್ಟು ಅಳಿಲು ಸೇವೆ ಎಂದಿದ್ದಾರೆ. ಆದರೆ, ಬೀದರ್ ಜಿಲ್ಲಾಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ರಿಶೈನ್ ಸಂಸ್ಥೆಯ ಸೇವೆಯನ್ನು ಇನ್ನೂ ಗುರುತಿಸಿಲ್ಲ. ಈ ವಿಷಯವಾಗಿ ನನಗಂತೂ ಬೇಸರವಿಲ್ಲ. ಕೆಲಸ ಮಾಡುವುದು ಇನ್ನೂ ಬಹಳಷ್ಟಿದೆ ಎನ್ನುತಾರೆ ರೋಹನ್.
ನೀವೂ ರಿಶೈನ್ ಆರ್ಗನೈಸೇಶನ್ ತಂಡಕ್ಕೆ ಅಭಿನಂದನೆ ತಿಳಿಸಲು ಈ ನಂಬರ್‌ಗೆ ಕರೆ ಮಾಡಿ – 9066616858, ವೆಬ್ಸೈಟ್ : www.reshineorg.com

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.