ಸಮಾಜದಲ್ಲಿ ಭಾವೈಕತೆ ಮತ್ತು ಸೌಹಾರ್ದತೆಗಾಗಿ ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ ‘ಸದ್ಭಾವನಾ ನಡಿಗೆ’ ಸಾರ್ವಜನಿಕರ ಗಮನ ಸೆಳೆಯಿತು.
ನಗರದ ಮಹಮೂದ್ ಗವಾನ್ ಮದರಸಾ ಎದುರುಗಡೆ ಬೆಳಿಗ್ಗೆ ಸೇರಿದ ವಿವಿಧ ಧರ್ಮಗುರುಗಳು, ಮುಖಂಡರು ಸಸಿಗೆ ನೀರೆರೆದು ನಡಿಗೆಗೆ ಚಾಲನೆ ನೀಡಿದರು.
ಸದ್ಭಾವನಾ ನಡಿಗೆಯು ಮಹಮೂದ್ ಗವಾನ್ ಮದರಸಾದಿಂದ ಗವಾನ್ ಚೌಕ್, ಚೌಬಾರಾ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಜರುಗಿತು.

ನೂರಾರು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಮುದಾಯ, ಸಂಘ-ಸಂಸ್ಥೆಗಳ ಮುಖಂಡರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ʼಸರ್ವಜನಾಂಗದ ಶಾಂತಿ ತೋಟʼವಾದ ಈ ನೆಲದಲ್ಲಿ ಸಹಬಾಳ್ವೆಯಿಂದ ಬದುಕೊಣ ಎಂದು ಘೋಷಣೆ ಕೂಗಿದರು.
ವಿದ್ಯಾರ್ಥಿಗಳು, ಮಹಿಳೆಯರು ʼಒಂದು ರಾಷ್ಟ್ರ-ಒಂದು ಧ್ವನಿ- ಒಂದು ಏಕತೆ’, ‘ಹಲವು ಧರ್ಮಗಳು ಒಂದೇ ಮಾನವೀಯತೆ’, ‘ದ್ವೇಷವಲ್ಲ; ಪ್ರೀತಿಯನ್ನು ಹರಡೋಣ’, ‘ಪ್ರತಿಯೊಂದು ಧರ್ಮವೂ ಒಂದು ಹೂವಂತೆ ಶಾಂತಿಯ ತೋಟದಲ್ಲಿ ಜತೆಗೂಡಿ ಅರಳೋಣ’, ‘ಶಾಂತಿಯಲ್ಲಿ ಜೊತೆಗೂಡಿ ನಡೆಯೋಣ- ಭಾತೃತ್ವವೇ ನಮ್ಮ ಶಕ್ತಿ’, ‘ಮಾನವೀಯತೆಯ ಮನೆಯಲ್ಲಿ ದ್ವೇಷಕ್ಕೆ ಜಾಗವಿಲ್ಲ’, ‘ದಂಗೆ ಬೇಡ, ಹಕ್ಕುಗಳು ಮತ್ತು ಗೌರವ ಬೇಕು’, ‘ಏಕತೆ ನಮ್ಮ ಶಕ್ತಿ, ವಿಭಜನೆ ನಮ್ಮ ನಾಶ, ಎಲ್ಲರಿಗೂ ಸಾಮರಸ್ಯವೇ ಬೇಕು’ ಎಂಬ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಬರೆದ ಫಲಕಗಳನ್ನು ಕೈಯಲ್ಲಿ ಹಿಡಿದು ಹೆಜ್ಜೆ ಹಾಕಿದರು.
ದೇಶ, ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ಧರ್ಮ ಹಾಗೂ ಜಾತಿ ಆಧಾರದಲ್ಲಿ ದ್ವೇಷ, ತಾರತಮ್ಯ, ಕೊಲೆ, ಗುಂಪು ಕೊಲೆ, ಆರ್ಥಿಕ ಬಹಿಷ್ಕಾರ, ಕೋಮು ಗಲಭೆಯಂತಹ ಸಾಮಾಜಿಕ ಅನಿಷ್ಠಗಳು ಜರುಗುತ್ತಿದ್ದು, ಇವುಗಳನ್ನು ತಡೆಯಲು ಸರ್ಕಾರ ಹಾಗೂ ನಾಗರಿಕರು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿ, ʼಸಮಾಜದ ದ್ವೇಷ, ಅಸೂಯೆ ಹೊಡೆದೋಡಿಸಿ ಪ್ರೀತಿಯನ್ನು ಹಂಚಬೇಕಾಗಿದೆ. ಭಾರತ ದೇಶದ ಸರ್ವಜನಾಂಗದವರು ಏಕತೆಯಿಂದ ಬದುಕುಬೇಕು. ನಾವೆಲ್ಲರೂ ಸೌಹಾರ್ದತೆಯಿಂದ ಸಮ ಸಮಾಜ ಕಟ್ಟುವ ಗುರಿಯಾಗಬೇಕುʼ ಎಂದರು.
ಆಣದೂರಿನ ಭಂತೆ ಜ್ಞಾನಸಾಗರ್ ಮಾತನಾಡಿ, ʼಸದ್ಭಾವನಾ ನಡಿಗೆ ಸಮಾಜಕ್ಕೆ ಪ್ರೇರಣೆಯಾಗಿದೆ. ಎಲ್ಲರೂ ಸೌಹಾರ್ದತೆ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸುಖ-ಶಾಂತಿ ನೆಲೆಸಲು ಸಾಧ್ಯ. ಪ್ರೀತಿ-ಮೈತ್ರಿಯಿಂದ ದ್ವೇಷ ಕಿತ್ತೊಗೆಯಲು ಸಾಧ್ಯವಿದೆʼ ಎಂದು ನುಡಿದರು.
ಮೌಲಾನಾ ಮೋನಿಸ್ ಕಿರ್ಮಾನಿ ಮಾತನಾಡಿ, ʼದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಇಲ್ಲಿ ಹಿಂದೂ-ಮುಸ್ಲಿಂರು ಒಂದಾಗಿ ಬಾಳಬೇಕಿದೆ. ಮೇಲು-ಕೀಳು, ಭೇದ-ಭಾವ ಇಲ್ಲದೆ ಸರ್ವರೂ ಭಾವೈಕತೆಯಿಂದ ಜೀವನ ನಡೆಸಬೇಕಾದರೆ ಪ್ರೀತಿ ಒಂದೇ ಬೇಕು. ದ್ವೇಷದಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯವಿಲ್ಲʼ ಎಂದು ಹೇಳಿದರು.

ಫಾದರ್ ವಿಲ್ಸನ್ ಫರ್ನಾಂಡೀಸ್ ಮಾತನಾಡಿ, ʼಸಮಾಜದಲ್ಲಿ ದ್ವೇಷ, ಅಸೂಯೆ, ಸುಳ್ಳು ಬಿತ್ತುವ ಸಂಘ-ಸಂಸ್ಥೆ, ಮಾಧ್ಯಮಗಳ ವಿರುದ್ಧ ನಮ್ಮ ದನಿಯಾಗಿದೆ. ದೇಶದಲ್ಲಿ ಧರ್ಮ-ಜಾತಿ ಮಧ್ಯೆ ತಾರತಮ್ಯ ದ್ವೇಷ ಹೋಗಲಾಡಿಸಿ ಸೌಹಾರ್ದತೆ ಕಾಪಾಡುವುದು ಸದ್ಭಾವನಾ ನಡಿಗೆಯ ಗುರಿಯಾಗಿದೆʼ ಎಂದು ತಿಳಿಸಿದರು.
ಸದ್ಭಾವನಾ ಮಂಚ್ ಸಂಚಾಲಕ ಗುರುನಾಥ ಗಡ್ಡೆ, ಸಹ ಸಂಚಾಲಕ ಮಹಮ್ಮದ್ ನಿಜಾಮುದ್ದೀನ್, ಮೌಲಾನಾ ಮುಜೀಬುರ್ ರಹಮಾನ್ ಖಾಸ್ಮಿ ಅವರು ಮಾತನಾಡಿ, ʼದೇಶ, ರಾಜ್ಯದಲ್ಲಿ ಕೆಲ ವರ್ಷಗಳಿಂದ ಧರ್ಮ ಹಾಗೂ ಜಾತಿ ಆಧಾರದಲ್ಲಿ ದ್ವೇಷ, ತಾರತಮ್ಯ, ಕೊಲೆ, ಗುಂಪು ಕೊಲೆ, ಆರ್ಥಿಕ ಬಹಿಷ್ಕಾರ, ಕೋಮು ಗಲಭೆಯಂತಹ ಸಾಮಾಜಿಕ ಅನಿಷ್ಠಗಳು ಜರುಗುತ್ತಿದ್ದು, ಇವುಗಳನ್ನು ತಡೆಯಲು ಸರ್ಕಾರ ಹಾಗೂ ನಾಗರಿಕರು ಪ್ರಯತ್ನಿಸಬೇಕಾಗಿದೆʼ ಎಂದು ಹೇಳಿದರು.
ʼಸಾಮಾಜಿಕ ಅಶಾಂತಿ, ಕೋಮು ಸೌಹಾರ್ದ ಕೆಡಿಸುವ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಹೊಣೆಗಾರರ ಬೇಜವಾಬ್ದಾರಿ ಹೇಳಿಕೆ ತಡೆಯಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮ ಜರುಗಿಸಬೇಕು. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಸರ್ವಧರ್ಮ ಹಾಗೂ ಸಮುದಾಯಗಳ ಮುಖಂಡರ ಸಭೆ ಕರೆದು ಪರಿಸ್ಥಿತಿ ತಿಳಿಗೊಳಿಸಬೇಕು. ಆಗಸ್ಟ್ 20 ರಂದು ಸದ್ಭಾವನಾ ದಿನ ಅರ್ಥಪೂರ್ಣವಾಗಿ ಆಚರಿಸಬೇಕು. ಸದ್ಭಾವನೆ ಕುರಿತು ನಿಬಂಧ, ಭಾಷಣ, ಓಟದ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಬೇಕು. ಕೋಮು ಸೌಹಾರ್ದಕ್ಕೆ ಶ್ರಮಿಸುವ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರೋತ್ಸಾಹಿಸಬೇಕು. ಯಾವುದೇ ಧರ್ಮ ಗ್ರಂಥ ಹಾಗೂ ಮಹಾ ಪುರುಷರನ್ನು ಅವಮಾನಿಸಿ ಮಾತನಾಡುವುದನ್ನು ತಡೆಯಬೇಕುʼ ಎಂದು ಮನವಿ ಮಾಡಿದರು.

ಈ ಸಂಬಂಧ ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಆಗಮಿಸಿ ಹಕ್ಕೊತ್ತಾಯ ಪತ್ರ ಸ್ವೀಕರಿಸಿದರು. ಬಳಿಕ ಸದ್ಭಾವನಾ ಮಂಚ್ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತೆರಳಿ ಎಸ್ಪಿ ಪ್ರದೀಪ್ ಗುಂಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ : ರಾಜ್ಯ ಸರ್ಕಾರದ ʼಕಾಮ್ ಕಿ ಬಾತ್ʼ ಯಶಸ್ಸು ʼಮನ್ ಕಿ ಬಾತ್‌ನಲ್ಲಿ ಪ್ರಸ್ತಾಪ : ಸಚಿವ ಪ್ರಿಯಾಂಕ್ ಖರ್ಗೆ
ಫಾದರ್ ಕ್ಲೇರಿ ಡಿಸೋಜಾ, ಭಂತೆ ಜ್ಞಾನಸಾಗರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ವಿಜಡಂ ಕಾಲೇಜು ಅಧ್ಯಕ್ಷ ಮಹಮ್ಮದ್ ಆಸಿಫೊದ್ದೀನ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಪ್ರಮುಖರಾದ ಜಗಜೀತ್ ಸಿಂಗ್, ಬಾಬುರಾವ್ ಹೊನ್ನಾ, ವಿಜಯಕುಮಾರ, ಪಾಸ್ಟರ್ ವಿಜಯಕುಮಾರ ಡೇವಿಡ್, ಮೌಲಾನಾ ತಸದ್ದುಕ್ ನದ್ವಿ, ಮಹಮ್ಮದ್ ಮೌಅಝಮ್, ಶ್ರೀಕಾಂತ ಸ್ವಾಮಿ, ಓಂಪ್ರಕಾಶ ರೊಟ್ಟೆ, ಜಗದೀಶ್ವರ್ ಬಿರಾದಾರ, ವಿಠ್ಠಲದಾಸ್ ಪ್ಯಾಗೆ, ಮುಜಾಹಿದ್ ಪಾಶಾ ಖುರೇಶಿ, ಡಾ.ದೀಪಾ ನಂದಿ, ಅಸ್ಮಾ ಸುಲ್ತಾನಾ, ಸೈಯಿದಾ ಉಮ್ಮೆ ಹಬೀಬಾ, ಡಾ.ಬುಶ್ರಾ ಐಮನ್, ಎಹತೆಶಾಮುದ್ದೀನ್, ಡಾ.ಮಕ್ಸೂದ್ ಚಂದಾ, ಮನ್ಸೂರ್ ಅಹಮ್ಮದ್ ಖಾದ್ರಿ ಮೊದಲಾದವರು ನಡಿಗೆಯಲ್ಲಿ ಪಾಲ್ಗೊಂಡಿದ್ದರು.