ಸಂತ ಸೇವಾಲಾಲ್ ಮಹಾರಾಜರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಮುನ್ನಡೆಯಬೇಕೆಂದು ಬೀದರ್ ಲೋಕಸಭಾ ಸಂಸದ ಸಾಗರ ಈಶ್ವರ ಖಂಡ್ರೆ ಹೇಳಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ 286ನೇ ಸಂತ ಸೇವಾಲಾಲ್ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ʼಸಂತ ಸೇವಾಲಾಲ್ ಮಹಾರಾಜರು ಪವಾಡ ಪುರುಷರಾಗಿದ್ದರು, ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಮೂಢನಂಬಿಕೆ, ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿ ಜನರಿಗೆ ತಿಳಿವಳಿಕೆ ಮೂಡಿಸಿದರು. ಸಮಾಜದ ಐಕ್ಯತೆ ಮತ್ತು ಸಹಬಾಳ್ವೆಗೆ ಪ್ರೇರೆಪಿಸಿದರು. ಬ್ರಿಟಿಷರು ತೆರಿಗೆ ಹೆಚ್ಚಳ ಮಾಡಿದಾಗ ವೀರ ಸೇನಾನಿಯಾಗಿ ಹೋರಾಡಿದರು. ಯಾವುದೇ ಮಹಾನ್ ಪುರುಷರು ಒಂದೇ ಜಾತಿಗೆ ಸೀಮಿತವಲ್ಲ. ಅವರು ಮಾನವ ಕುಲಕ್ಕೆ ಸುಧಾರಣೆಗೆ ಪ್ರಯತ್ನಿಸಿದವರುʼ ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ರಾಜಕುಮಾರ ಥಾವರಾ ಖೋಲಾ ಅವರು ಅತಿಥಿ ಉಪನ್ಯಾಸದಲ್ಲಿ ಮಾತನಾಡಿ, ʼಸಂತ ಸೇವಾಲಾಲ ಅವರು ದಾವಣಗೆರೆ ಜಿಲ್ಲೆಯ ಸುರಗೊಂಡನ ಕೊಪ್ಪದಲ್ಲಿ 1739ರ ಫೆಬ್ರವರಿ 15 ರಂದು ಶಿರಿಸಿಯ ಮಾರಿಕಾಂಬಾ ದೇವಿಯ ಕೃಪಾದಿಂದ ಜನಿಸಿದರು. ಹೆಂಗಸರು, ಗಂಡಸರು ಭಾಯಿ (ಅಣ್ಣ) ಎನ್ನುವುದರಿಂದಾಗಿ ಆ ಜನ್ಮ ಬ್ರಹ್ಮಚಾರಿ ಜೀವನ ಕಳೆದರುʼ ಎಂದು ಹೇಳಿದರು.
ʼಸಂತ ಪರಂಪರೆಯ ಕಡೆಗೆ ಒಲವು ಹೊಂದಿದ್ದ ಸೇವಾಲಾಲ್ ತನ್ನ ಪವಾಡಗಳಿಂದ ಸೇವಾ ಭಾಯಿ ಎಂದೇ ಪ್ರಸಿದ್ಧರಾದರು. ಭವ್ಯ ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯವನ್ನು ಲಂಬಾಣಿ, ಲಮಾಣಿ, ಸುಗಾಲಿ, ಸುಕಾಲಿ ಗೋರ್, ಢಾಡಿ, ಢಾಲ್ಯ, ಸೋನಾರ್, ಲೋಹಾರ್ ಮುಂತಾದ ಉಪನಾಮಗಳಿಂದ ಕರೆಯಲಾಗುತ್ತದೆʼ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶ್ರೀ ಸಂತ ಸೇವಾಲಾಲ್ ಮಹಾರಾಜ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಸೇವಲಾಲ್ ಮಾಹಾರಾಜರ ಭಾವಚಿತ್ರ ಮೆರವಣಿಗೆಯು ಶಿವಾಜಿ ವೃತ್ತ, ಭಗತಸಿಂಗ್ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರವರೆಗೆ ನಡೆಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ ಎಟಿಎಂ ದರೋಡೆ ಪ್ರಕರಣ: ಆರೋಪಿಗಳ ಫೋಟೊ ಬಿಡುಗಡೆ; ಮಾಹಿತಿ ಕೊಟ್ಟವರಿಗೆ ₹5 ಲಕ್ಷ ಬಹುಮಾನ!
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮಹಮ್ಮದ ಶಕೀಲ, ಬಂಜಾರ ಶಕ್ತಿ ಪೀಠ ಸೇವಾ ನಗರದ ಗುರುಗಳಾದ ರಾಮ ಚೈತನ್ಯ ಮಹಾರಾಜ, ಬೀದರ ವಿಶ್ವವಿದ್ಯಾಲಯದ ಕುಲಸಚಿವ ಪರಮೇಶ್ವರ್ ನಾಯಕ್, ಸಮಾಜದ ಮುಖಂಡರಾದ ಗೋವರ್ಧನ ರಾಥೋಡ್, ಬಸವರಾಜ ಪವಾರ್, ರಮೇಶಕುಮಾರ್ ಜಾಧವ, ಮಾಣಿಕರಾವ ಪವಾರ್ ಹಾಗೂ ಸಮಾಜದ ಬಾಂಧವರು ಭಾಗವಹಿಸಿದ್ದರು.