- ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ, ರಾಷ್ಟ್ರಧ್ವಜಕ್ಕೆ ಅವಮಾನ
- ಬಸ್ ನಿಲುಗಡೆಗೆ ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಅಂದಾಜು ₹50 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಭವ್ಯ ಕಟ್ಟಡ ನಿರ್ಮಿಸಿ ಹತ್ತು ವರ್ಷಗಳು ಉರುಳಿವೆ. ಆದರೆ, ಒಂದು ದಿನವೂ ಈ ಬಸ್ ನಿಲ್ದಾಣಕ್ಕೆ ಬಸ್ ನಿಲುಗಡೆ ಇಲ್ಲ. ಪ್ರಯಾಣಿಕರಿಗೆ ಬಳಕೆಯಾಗದೆ ಸಂತಪೂರ ಬಸ್ ನಿಲ್ದಾಣ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಬೀದರ್ – ಔರಾದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಸಾರ್ವಜನಿಕರಿಗೆ ಎಳ್ಳಷ್ಟೂ ಉಪಯುಕ್ತ ಇಲ್ಲದೆ ಪಾಳು ಬಿದ್ದಿದ್ದು, ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿಲ್ದಾಣ ಬಳಕೆಗಾಗಿ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಸಂತಪೂರ ನಾಗರಿಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕು ಮಟ್ಟದ ಕಚೇರಿಗಳಿರುವ ಗ್ರಾಮ
ಔರಾದ ತಾಲೂಕು ರಚನೆಗೆ ಮುನ್ನ ಸಂತಪೂರ ತಾಲೂಕು ಕೇಂದ್ರವಾಗಿತ್ತು. ಕಾರಣಾಂತರಗಳಿಂದ ಸಂತಪೂರ ದಿಂದ ಔರಾದಗೆ ವರ್ಗಾವಣೆಯಾಗಿದೆ. ಔರಾದ ತಾಲೂಕು ಮಟ್ಟದ ಪ್ರಾದೇಶಿಕ ಅರಣ್ಯ ಇಲಾಖೆ, ಮೀನುಗಾರಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಕಚೇರಿಗಳು ಇಂದಿಗೂ ಸಂತಪೂರ ಗ್ರಾಮದಲ್ಲಿವೆ. ಆದರೆ ಸಂತಪೂರ ಗ್ರಾಮದ ಸಾರ್ವಜನಿಕರ ಅನುಕೂಲಕ್ಕಾಗಿ ಸೂಕ್ತ ಬಸ್ ನಿಲ್ದಾಣ ಬಳಕೆ ಆಗದೇ ಇರುವುದು ವಿಪರ್ಯಾಸ.

ತೆಲಂಗಾಣ – ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಸಂತಪೂರ ಗ್ರಾಮ ಬೀದರ್-ಔರಾದ ರಾಷ್ಟ್ರೀಯ ಹೆದ್ದಾರಿಗೆ ಇರುವ ಸಂತಪೂರ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರ ಹೊಂದಿರುವ ಊರು. ನಾನಾ ಕೆಲಸಗಳಿಗೆ ಆಗಮಿಸುವ ಸುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ವಿಶ್ರಾಂತಿ ಪಡೆಯಲು ಸೂಕ್ತ ಬಸ್ ನಿಲ್ದಾಣ ಇಲ್ಲದೆ ಅಂಗಡಿ ಮುಂಗ್ಗಟ್ಟು, ರಸ್ತೆ ಮೇಲೆ ನಿಲ್ಲಬೇಕಾದ ಪರಿಸ್ಥಿತಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪ್ರಯಾಣಿಕರಿಗೆ ‘ಅನುಭವ ಮಂಟಪ’ ಆಶ್ರಯ
ಸದ್ಯ ಸಂತಪೂರ ಬಸವೇಶ್ವರ ವೃತ್ತದ ರಸ್ತೆ ಬದಿಯಲ್ಲಿ ಬಸ್ ನಿಲ್ಲುತ್ತವೆ. ಔರಾದ್‌ಗೆ ತೆರಳುವ ಪ್ರಯಾಣಿಕರಿಗೆ ಅನುಭವ ಮಂಟಪ ಆಸರೆಯಾದರೆ, ಉಳಿದ ಮಾರ್ಗಕ್ಕೆ ಪ್ರಯಾಣಿಸುವರಿಗೆ ಅಂಗಡಿ ಮುಂಗಟ್ಟುಗಳೇ ಆಶ್ರಯವಾಗಿವೆ. ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಒಂದೇ ಸ್ಥಳದಲ್ಲಿ ನಿಲ್ಲುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಂಚಾರ ದಟ್ಟಣೆ ಹೆಚ್ಚಾದ ಕಾರಣ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಹಲವು ಅಪಘಾತ ಜರುಗಿದ ಉದಾಹರಣೆಗಳಿವೆ.

ರಾಷ್ಟ್ರಧ್ವಜ, ಮಹಾತ್ಮರಿಗೆ ಅವಮಾನ
“ಸಂತಪೂರ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಬಸ್ ನಿಲ್ದಾಣ ಬಹುತೇಕ ಪ್ರಯಾಣಿಕರಿಗೆ ಗೊತ್ತೇ ಇಲ್ಲ. ನಿಲ್ದಾಣ ಉದ್ಘಾಟನೆಯಾದರೂ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಮುಂದಾಗಿಲ್ಲ. ಯಾವುದೇ ಸಿಬ್ಬಂದಿ ನೇಮಿಸಿಲ್ಲ. ಬಳಕೆಯಾಗದೆ ಪಾಳುಬಿದ್ದ ನಿಲ್ದಾಣ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದಿವೆ. ಕಟ್ಟಡದ ಕಿಡಕಿ ಗಾಜು ಪುಡಿಯಾಗಿವೆ, ಬಿಯರ್ ಬಾಟಲ್‌ಗಳಿಂದ ಅವಸ್ಥೆಯ ತಾಣವಾಗಿದೆ. ಕೋಣೆಯಲ್ಲಿ ಅಳವಡಿಸಿದ ಮಹಾತ್ಮರ ಫೋಟೋ ಧೂಳು ಹಿಡಿದಿವೆ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಅಲ್ಲದೇ ರಾಷ್ಟ್ರಧ್ವಜ ನೆಲದ ಮೇಲೆ ಎಸೆಯಲಾಗಿದೆ” ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಗೌತಮ ಮೇತ್ರೆ ಆಕ್ರೋಶ ವ್ಯಕ್ತಪಡಿಸಿದರು.
ಇದ್ದು ಇಲ್ಲದಂತಾದ ಬಸ್ ನಿಲ್ದಾಣ
“ಸಂತಪೂರ ಬಸ್ ನಿಲ್ದಾಣ ಇದ್ದು ಇಲ್ಲದಂತಾಗಿದೆ. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದಿದ್ದರೆ ಸಾರ್ವಜನಿಕರು ಹೇಗೆ ಹೋಗುವುದು? ಈ ಬಗ್ಗೆ ಇಲಾಖೆ ಅಧಿಕಾರಿಗಳು ನಿಲ್ದಾಣ ಸ್ವಚ್ಛಗೊಳಿಸಿ ಪ್ರಯಾಣಿಕರ ಬಳಕೆಗೆ ಉಪಯೋಗಿಸಬೇಕು” ಎಂದು ಗ್ರಾಮದ ಯುವ ಮುಖಂಡ ಸಂತೋಷ ಪಾಟೀಲ್ ಈದಿನ.ಕಾಮ್ ಮೂಲಕ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಮಹಿಳೆಯರ ಸವಾರಿ
ಬಸ್ ನಿಲುಗಡೆಗೆ ವಾರದೊಳಗೆ ಕ್ರಮ; ಘಟಕ ವ್ಯವಸ್ಥಾಪಕ
ಔರಾದ್ ಬಸ್ ಘಟಕದ ವ್ಯವಸ್ಥಾಪಕ ಎಸ್ ಟಿ ರಾಠೋಡ್, ಈದಿನ.ಕಾಮ್ ಜೊತೆಗೆ ಮಾತನಾಡಿ, “ಸಂತಪೂರ ಗ್ರಾಮದ ಹೊರವಲಯದಲ್ಲಿ ಇರುವ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದ ಕಾರಣಕ್ಕೆ ಬಸ್ ನಿಲುಗಡೆ ಆಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ವಾರದೊಳಗೆ ನಿಲ್ದಾಣದಲ್ಲಿ ಸಿಬ್ಬಂದಿ ನೇಮಿಸಿ ಎಲ್ಲ ಬಸ್ ನಿಲುಗಡೆ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.