ಬಿರು ಬೇಸಿಗೆಯ ಈ ದಿನಗಳಲ್ಲಿ ಜನ, ಜಾನುವಾರು, ಪ್ರಾಣಿ–ಪಕ್ಷಿಗಳು ಕುಡಿಯುವ ನೀರು, ನೆರಳಿಗಾಗಿ ದಿನವಿಡೀ ಪರಿತಪಿಸುವುದು ಬಿಸಿಲನಾಡು ಬೀದರ್ ಜಿಲ್ಲೆಯಲ್ಲಿ ನಿತ್ಯ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ.
ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಪ್ರಖರವಾದ ಬಿಸಿಲಿಗೆ ಜನರು ತಿರುಗಾಡಲು ಅಕ್ಷರಶಃ ಪರದಾಡುತ್ತಿದ್ದಾರೆ. ಈ ರಣಬಿಸಿಲಿನಲ್ಲಿ ದಣಿದ ಪ್ರಾಣಿ, ಪಕ್ಷಿಗಳಿಗೆ ನೀರು, ಕಾಳು, ಆಹಾರದ ವ್ಯವಸ್ಥೆಯನ್ನು ಅನೇಕರು ಒದಗಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಬೀದರ್ ನಗರಸಭೆ ಎದುರಗಡೆಯ ಬಸ್ ನಿಲ್ದಾಣದ ಆವರಣದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಸೇವಕರು ಕಳೆದ ಒಂದು ತಿಂಗಳಿಂದ ಉಚಿತ ನೀರಿನ ವ್ಯವಸ್ಥೆ ಮಾಡಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ.
ಬಿಸಿಲ ಧಗೆಯಿಂದ ಬಾಯಾರಿ ಬಂದ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ವಾಹನ ಚಾಲಕರಿಗೆ ʼಬಿಸುಲ್ ಭಾಳ್ ಅದಾ, ಬರೀ ತಣ್ಣಂದ್ ನೀರ್ ಕುಡೀರಿʼ ಎಂದು ಲೋಟದಲ್ಲಿ ಶುದ್ಧ ತಂಪಾದ ನೀರು ಕೈಗಿಡುವ ಸೇವಕರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ʼಕಳೆದ ಒಂದು ತಿಂಗಳಿಂದ ನಮ್ಮ ಸಂಸ್ಥೆಯಿಂದ ನೀರಿನ ಕ್ಯಾನ್ ಇಡಲಾಗಿದೆ. ಸಂಸ್ಥೆಯ ಇಬ್ಬರು ಸೇವಕರು ದಿನಪೂರ್ತಿ ಇಲ್ಲೇ ಕುಳಿತು ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿ ನಿತ್ಯ 30 ಕ್ಯಾನ್ ಶುದ್ಧ ಕುಡಿಯುವ ನೀರು ಖರೀದಿಸಿ ಬೆಳಿಗ್ಗೆ 11 ಗಂಟೆಯಿಂದ ಸಂಜೆಯವರೆಗೆ ಪೂರೈಸಲಾಗುತ್ತಿದೆʼ ಎಂದು ನಿವೃತ್ತ ಶಿಕ್ಷಕರು ಆದ ಸಂಸ್ಥೆಯ ಸೇವಕರಾದ ಶಿವರಾಜ ಮದರಗಿ ಹೇಳುತ್ತಾರೆ.

ʼಬೇಸಿಗೆಯಲ್ಲಿ ಬಾಯಾರಿ ಬಂದ ಜನರಿಗೆ ನೀರು ಕೊಡುವುದು ಮಾನವೀಯ ಕೆಲಸ. ಸೇವಾ ಮನೋಭಾವನೆ ದೃಷ್ಟಿಯಿಂದ ನಮ್ಮ ಸಂಸ್ಥೆಯಿಂದ ಒಂದು ಕಡೆ ತಂಪು ನೀರಿನ ವ್ಯವಸ್ಥೆ ಮಾಡಲಾಗಿದೆ. ಹಳ್ಳಿಗಳಿಂದ ಬಂದ ಜನರು, ವಿದ್ಯಾರ್ಥಿಗಳು, ವೃದ್ಧರಿಗೆ ಆಸರೆಯಾಗಿದೆ. ಮುಂದಿನ ವರ್ಷ ಇದು ವಿಸ್ತರಿಸಲಾಗುವುದುʼ ಎಂದು ಸೇವಕರಾದ ವಿಮಲಬಾಯಿ ಫುಲೇಕರ್, ಸ್ವಪ್ನಾ ಪುರಾಣಿಕ ಹೇಳಿದರು.
ಹೊರಗಡೆ ಅಂಗಡಿಗಳಲ್ಲಿ ಒಂದು ಲೀಟರ್ ನೀರಿನ ಬಾಟಲಿಗೆ 20 ರೂ. ದರ ಇದೆ. ಸತ್ಯಸಾಯಿ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಮಾನವೀಯ ಕಾರ್ಯ. ಗ್ರಾಮೀಣ ಭಾಗದಿಂದ ಬಂದ ಅನೇಕರು ಇಲ್ಲೇ ಬಂದು ತಂಪಾದ ನೀರು ಬಾಟಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕುಡಿಯುವ ನೀರು ಖರೀದಿಸುವುದು ತಪ್ಪಿದೆ. ಜಿಲ್ಲಾಡಳಿತ ಮಾಡಬೇಕಾದ ಕಾರ್ಯ ಸಂಸ್ಥೆಯವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.