ಪ್ರಸಕ್ತ ಶೈಕಣಿಕ ವರ್ಷದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಪದವಿಪೂರ್ವ ಕಾಲೇಜುಗಳಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ತರಬೇತಿ ಪಡೆಯುವ 125 ಪುನರಾವರ್ತಿತ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಶಿಷ್ಯವೇತನ ನೀಡಲಿದೆ.
‘ನಾರಾಯಣ ಹೃದಯಾಲಯವು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಯೋಗದೊಂದಿಗೆ ಸತತ ಮೂರನೇ ವರ್ಷವೂ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡಲು ನಿರ್ಧರಿಸಿದೆʼ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
ʼನಾರಾಯಣ ಹೃದಯಾಲಯ ಒಟ್ಟು 125 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಿದ್ದು, ಈ ಪೈಕಿ 50 ಸ್ಥಾನಗಳನ್ನು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಉಳಿದ 75 ಸ್ಥಾನಗಳಿಗೆ ದೇಶದ ಎಲ್ಲೆಡೆಯ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದಾಗಿದೆʼ ಎಂದು ಹೇಳಿದ್ದಾರೆ.
ʼಶಿಷ್ಯವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ ೧೦೦ ರಷ್ಟು ವಿನಾಯಿತಿ ಇರಲಿದೆ. ೧೨೫ ಅಭ್ಯರ್ಥಿಗಳ ಪೈಕಿ ೧೦೦ ವಿದ್ಯಾರ್ಥಿಗಳಿಗೆ ಬೀದರ್ ಹಾಗೂ 25 ವಿದ್ಯಾರ್ಥಿಗಳಿಗೆ ಕಲಬುರಗಿಯಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಶಾಹೀನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜತೆಗೂಡಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದುʼ ಎಂದು ಹೇಳಿದ್ದಾರೆ.
ಈ ವರ್ಷದ ನೀಟ್‌ನಲ್ಲಿ 400ಕ್ಕೂ ಅಧಿಕ ಅಂಕ ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು, 350ಕ್ಕೂ ಅಧಿಕ ಅಂಕ ಗಳಿಸಿದ ತೆಲಂಗಾಣದ ಅಭ್ಯರ್ಥಿಗಳು, 475ಕ್ಕೂ ಹೆಚ್ಚು ಅಂಕ ಪಡೆದ ಹಾಗೂ ವಾರ್ಷಿಕ ರೂ. 5 ಲಕ್ಷಕ್ಕೂ ಕಡಿಮೆ ಕುಟುಂಬದ ಆದಾಯ ಹೊಂದಿರುವ ಇತರ ರಾಜ್ಯಗಳ ಅಭ್ಯರ್ಥಿಗಳು ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ ಎಂದಿದ್ದಾರೆ.
ಶಿಷ್ಯವೇತನಕ್ಕೆ ಹೆಸರು ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. www.shaheengroup.org ನಲ್ಲಿ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಟೊಲ್ ಫ್ರೀ ಸಂಖ್ಯೆ 18001216235ಗೆ ಸಂಪರ್ಕಿಸಬಹುದು
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ಹೆಸರು ನೋಂದಣಿ ಹಾಗೂ ಇತರ ಮಾಹಿತಿಗೆ ಸುರೇಶ ಚನಶೆಟ್ಟಿ (ಬೀದರ್- 9986792323), ವಿಜಯಕುಮಾರ ಪಾಟೀಲ ತೇಗಲತಿಪ್ಪಿ (ಕಲಬುರಗಿ- 98803 49025) ಸಿದ್ದಪ್ಪ ಹೊಟ್ಟಿ (ಯಾದಗಿರಿ- 9480957169), ಡಾ.ನಿಷ್ಟಿರುದ್ರಪ್ಪ (ಬಳ್ಳಾರಿ- 9342726398), ಶರಣಗೌಡ ಪೊಲೀಸ್ ಪಾಟೀಲ (ಕೊಪ್ಪಳ- 9741980328) ಅಥವಾ ರಂಗಣ್ಣ ಪಾಟೀಲ (ರಾಯಚೂರು- 9095392296)ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಒಂದೇ ಹೆಸರಿನ ಮೂವರು ಸಹೋದರರು; ಹೆಸರಿನ ಹಿಂದಿನ ಗುಟ್ಟೇನು ಗೊತ್ತಾ!
ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಲು ನೀಡಲಾಗುತ್ತಿರುವ ಶಿಷ್ಯವೇತನದ ಲಾಭ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.