ಬೀದರ್ ಜಿಲ್ಲೆಯ ಜನವಾಡ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಸರ್ಕಾರ ಕೃಷಿ ಡಿಪ್ಲೊಮಾ ಕೋರ್ಸ್ ರದ್ದುಪಡಿಸುವುದನ್ನು ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ .
ಬೀದರ್‌ನ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಸಂಘಟನೆಯ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಜನವಾಡ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ 2012ರಲ್ಲಿ ಎರಡು ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್ ಆರಂಭವಾಗಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸದರಿ ಕೋರ್ಸ್ ಸ್ಥಗಿತಗೊಳಿಸಿದೆ. ಜಿಲ್ಲೆಯಲ್ಲಿ 10 ವರ್ಷಗಳಿಂದ ಡಿಪ್ಲೋಮಾ ಕೃಷಿ ಸಂಶೋಧನಾ ಕೇಂದ್ರವು ಪ್ರಾರಂಭವಾಗಿದ್ದು, ಡಿಪ್ಲೋಮಾ ಕೃಷಿ ಕೋರ್ಸ್ ಪಡೆದ ವಿದ್ಯಾರ್ಥಿಗಳು ಅನೇಕ ಕೈಗಾರಿಕಾ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಧಿಡೀರನೆ ಡಿಪ್ಲೊಮಾ ಕೋರ್ಸ್ ರದ್ದು ಮಾಡಿರುವುದು ವಿದ್ಯಾರ್ಥಿ ವಿರೋಧಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಎಫ್‌ಐ ಜಿಲ್ಲಾ ಸಮಿತಿ ಅಧ್ಯಕ್ಷ ಅರುಣ ಕೋಡಗೆ ಮಾತನಾಡಿ, “ರಾಜ್ಯ ಸರ್ಕಾರ ದಿಢೀರನೆ ಕೃಷಿ ಡಿಪ್ಲೊಮಾ ಕೋರ್ಸ್ ರದ್ದು ಮಾಡಿದ್ದು, ಕೃಷಿಯಲ್ಲಿ ಡಿಪ್ಲೊಮಾ ಕೋರ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಬಯಸಿದ್ದ ಹಲವು ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ಕೃಷಿ ಡಿಪ್ಲೊಮಾ ಕೋರ್ಸ್ ಯಥಾವತ್ತಾಗಿ ಮುಂದುವರಿಸಲು ಅನುಮತಿ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ಕೃಷಿ ಡಿಪ್ಲೊಮಾ ಕೋರ್ಸ್ ವಿದ್ಯಾರ್ಥಿಗಳು ಇದ್ದರು.