ಉರ್ದುವಿನ ಕಾವ್ಯರಾಣಿ ಗಜಲ್ ಪ್ರಕಾರವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಶಾಂತರಸರು ಕನ್ನಡದ ಗಜಲ್ ಗಾರುಡಿಗರಾಗಿದ್ದಾರೆ ಎಂದು ರಾಂಪೂರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಹೇಳಿದರು.
ಬಸವಕಲ್ಯಾಣದ ನಿವೃತ್ತ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ಶಾಂತರಸರ ಜನ್ಮಶತಮಾನೋತ್ಸವ ಪ್ರಯುಕ್ತ ಶಾಂತರಸರ ಗಜಲ್, ಕತೆ, ಕಾದಂಬರಿ ಕುರಿತ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಬೇರೆ ಭಾಷೆಯ ಕಾವ್ಯ ಪ್ರಕಾರವಾದ ಗಜಲ್ ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಶಾಂತರಸರದು. ಸ್ವಾತಂತ್ರ್ಯ ಚಳುವಳಿ, ಏಕೀಕರಣ, ವಿಮೋಚನಾ ಚಳವಳಿ ಸೇರಿ ಈ ನೆಲದ ಜನ ಸಮುದಾಯದ ಎದುರಿಸಿದ ಬಿಕ್ಕಟ್ಟುಗಳನ್ನು ಅವರ ಕತೆ, ಕಾದಂಬರಿಗಳಲ್ಲಿ ವಸ್ತುವಾಯಿತು. ಬದುಕಿನ ಉತ್ಕಟ ಪ್ರೇಮ, ನಶ್ವರತೆ, ಜೀವನದ ಚಲನೆ ಗಜಲ್ ಗಳ ವಸ್ತುವಾಯಿತುʼ ಎಂದರು.
ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಶಾಂತರಸರು ಭಾಲ್ಕಿ ಹಿರೇಮಠದಲ್ಲಿದ್ದು ವ್ಯಾಸಂಗ ಮಾಡಿದ್ದರು. ವಚನ ಸಾಹಿತ್ಯ ಹಾಗೂ ಚೆನ್ನಬಸವ ಪಟ್ಟದ್ದೇವರ ಪ್ರಭಾವ ಅವರ ಮೇಲೆ ಆಗಿತ್ತು. ಅವರು ಬರೆದ ʼಸಣ್ಣ ಗೌಡಸಾನಿʼ ನಾಟಕ ಊಳಿಗಮಾನ್ಯ ವ್ಯವಸ್ಥೆಯ ಕರಾಳ ಮುಖ ಪರಿಚಯಿಸುತ್ತದೆʼ ಎಂದರು.
ರಂಗಕರ್ಮಿ ಉಮೇಶ ಪಾಟೀಲ ಶಾಂತರಸರ ‘ಗೋದಾನ’ ಕತೆಯನ್ನು ನಾಟಕೀಯವಾಗಿ ವಾಚನ ಮಾಡಿದರು. ನಾಗೇಂದ್ರ ಬಿರಾದಾರ,ನಿತಿನ್ ನಿಲಕಂಠೆ ಗಜಲ್ ಗಾಯನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವನ್ಯಜೀವಿ ಪ್ರೀತಿಸುವ ʼಸ್ವಾಭಿಮಾನಿ ಗೆಳೆಯರುʼ
ನಿವೃತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವಣಪ್ಪಾ ನೆಲೋಗಿ, ಭೀಮಾಶಂಕರ ಮಾಶಾಳಕರ, ಪ್ರೇಮಸಾಗರ ಪಾಟೀಲ, ಚಂದ್ರಕಾಂತ ಅಕ್ಕಣ್ಣ, ಸಂಜುಕುಮಾರ ನಡುಕರ, ರಾಜಶೇಖರ ಬಿರಾದಾರ, ಧರ್ಮಣ್ಣ ಚಿತ್ತಾ, ಅಂಬಾರಾಯ ಸೈದಾಪುರೆ, ಶಿವಪುತ್ರಪ್ಪ ಸಂಗನಬಸವ , ಶಿವಪುತ್ರ ಮಿರಾಜದಾರ, ಬಸವರಾಜ ಮಠಪತಿ, ಮಾಣಿಕಪ್ಪ ಸಂಗನಬಟ್ಟೆ, ನಾಗಪ್ಪ ನಿಣ್ಣೆ, ಮಲ್ಲಿಕಾರ್ಜುನ ಛೆತ್ರೆ , ನಿವರ್ತಿ ಜಾಧವ್ ಮತ್ತಿತರರಿದ್ದರು. ಶರಣಬಸವ ಬಿರಾದಾರ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಶಾಲಿವಾನ ಕಾಕನಾಳೆ ವಂದಿಸಿದರು.