ಬೀದರ್‌ | ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ : ʼಅತಿಥಿʼಗಳೇ ಆಧಾರ!

Date:

Advertisements

ಜೂನ್‌ ಮೊದಲ ವಾರದಿಂದ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜುಗಳು ಪುನರಾರಂಭವಾಗಿದ್ದು, ಈ ವರ್ಷ ಕೂಡ ಜಿಲ್ಲೆಯ 20ಕ್ಕೂ ಹೆಚ್ಚಿನ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಕಾಡುತ್ತಿದೆ.

ಜಿಲ್ಲೆಯಲ್ಲಿ 24 ಸರ್ಕಾರಿ, 107 ಅನುದಾನ ರಹಿತ ಹಾಗೂ 42 ಅನುದಾನಿತ ಸೇರಿ ಒಟ್ಟು 173 ಪದವಿ ಪೂರ್ವ ಕಾಲೇಜುಗಳು ಇವೆ. ವರ್ಗಾವಣೆ, ನಿವೃತ್ತಿಯಾದ ಉಪನ್ಯಾಸಕರ ಖಾಲಿ ಹುದ್ದೆಗಳಿಗೆ ಪ್ರತಿ ವರ್ಷ ಅತಿಥಿ ಉಪನ್ಯಾಸಕರ ಮೇಲೆಯೇ ಕಾಲೇಜುಗಳು ಅವಲಂಬಿತವಾಗಿವೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೂಡ 60 ‘ಅತಿಥಿʼ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಸಿದ್ಧತೆ ನಡೆಸಿದೆ.

ಅನುದಾನಿ ರಹಿತ ಕಾಲೇಜುಗಳಲ್ಲಿ ತಮ್ಮ ಸಂಸ್ಥೆಗೆ ಅನುಗುಣವಾಗಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿವೆ. ಬಹುತೇಕ ಅನುದಾನಿತ ಕಾಲೇಜುಗಳಲ್ಲಿ ನಿವೃತ್ತಿಯಾದ ಉಪನ್ಯಾಸಕರ ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗದಕ್ಕೆ ಕಾಯಂ ಉಪನ್ಯಾಸಕರ ಕೊರತೆ ಎದುರಿಸುತ್ತಿವೆ, ಇದರಿಂದ ತಮ್ಮ ಸಂಸ್ಥೆಗೆ ಅನುಗುಣವಾಗಿ ಅವರು ಗೌರವಧನ ನೀಡಿ ತಾತ್ಕಾಲಿಕವಾಗಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿವೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಪ್ರಮುಖವಾಗಿ ಕಾಡುತ್ತಿದ್ದು, ವಿದ್ಯಾರ್ಥಿಗಳ ಗುಣಮಟ್ಟ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ.

Advertisements

ಜಿಲ್ಲೆಗೆ ಒಟ್ಟು 221 ಉಪನ್ಯಾಸಕರ ಹುದ್ದೆಗಳು ಮಂಜೂರು ಇದ್ದು, ಇದರಲ್ಲಿ 155 ಕಾಯಂ ಉಪನ್ಯಾಸಕರು ಇದ್ದಾರೆ. ಹೀಗಾಗಿ ಪ್ರತಿ ವರ್ಷ ಅತಿಥಿ ಉಪನ್ಯಾಸಕರ ಮೇಲೆಯೇ ಬಹುತೇಕ ಕಾಲೇಜುಗಳು ಅವಲಂಬಿತವಾಗಿವೆ. ಒಟ್ಟು 66 ಖಾಲಿ ಹುದ್ದೆಗಳ ಪೈಕಿ 60 ಅತಿಥಿ ಉಪನ್ಯಾಸಕರ ನೇಮಕಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

60 ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಹ್ವಾನ :

2025-26ನೇ ಸಾಲಿಗೆ ಬೀದರ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಎದುರಾಗಿ ಅತಿಥಿ ಉಪನ್ಯಾಕರುಗಳನ್ನು ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ವಿದ್ಯಾರ್ಹತೆ ಮತ್ತು ವಾಸಸ್ಥಳದ ಬಗ್ಗೆ ಮಾಹಿತಿಯುಳ್ಳ ಅರ್ಜಿಯ ಜೊತೆಗೆ ಸ್ನಾತಕೋತ್ತರ ಪದವಿಯ ದೃಢೀಕೃತ ಅಂಕಪಟ್ಟಿಗಳು., ಬಿ.ಎಡ್. ಪದವಿ ಪಡೆದ ದೃಢೀಕೃತ ಅಂಕಪಟ್ಟಿಗಳು, ಜನ್ಮ ದಿನಾಂಕಕ್ಕೆ ಸಂಬಂದಿಸಿದ ದಾಖಲೆಯ (ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ) ದೃಢೀಕೃತ ಪ್ರತಿಗಳೊಂದಿಗೆ ಇದೇ ಜೂನ್‌ 13ರೊಳಗಾಗಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ.

ʼಅತಿಥಿ ಉಪನ್ಯಾಸಕರನ್ನು ಹುದ್ದೆಗೆ ನಿಗಧಿ ಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು. ಸದರಿ ನೇಮಕಾತಿಗಳು ತಾತ್ಕಾಲಿಕವಾಗಿರುತ್ತವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್‌ ತಿಳಿಸಿದ್ದಾರೆ.

ವಿಷಯವಾರು ಅತಿಥಿ ಉಪನ್ಯಾಸಕರ ನೇಮಕ ಎಷ್ಟು?

ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ (6), ಇಂಗ್ಲಿಷ್‌ (3), ಹಿಂದಿ (3), ಉರ್ದು (4), ಇತಿಹಾಸ (8), ಅರ್ಥಶಾಸ್ತ್ರ (9), ಸಮಾಜಶಾಸ್ತ್ರ (6), ರಾಜ್ಯಶಾಸ್ತ್ರ (3), ಜೀವಶಾಸ್ತ್ರ (6), ವಾಣಿಜ್ಯಶಾಸ್ತ್ರ (7), ಗಣಿತಶಾಸ್ತ್ರ (3), ರಸಾಯನಶಾಸ್ತ್ರ (1), ಭೌತಶಾಸ್ತ್ರ (1) ವಿಷಯಗಳ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಕೊಳ್ಳಲಾಗುತ್ತಿದೆ.

2022-23ನೇ ಸಾಲಿನಲ್ಲಿ ಬೀದರ್ ಜಿಲ್ಲೆಯಲ್ಲಿ ಒಟ್ಟಾರೆ ಶೇ 78ರಷ್ಟು‌ ಪಿಯುಸಿ ಫಲಿತಾಂಶ ದಾಖಲಾಗಿ 18ನೇ ಸ್ಥಾನದಲ್ಲಿತ್ತು. 2023–24ರಲ್ಲಿ 19ನೇ ಸ್ಥಾನಕ್ಕೆ ಕುಸಿದರೂ ಶೇ 81.69 ಫಲಿತಾಂಶ ಬಂದಿತು. ಈ ಬಾರಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬೀದರ್ ಮೊದಲ ಸ್ಥಾನ ಪಡೆದರೂ ಶೇ.67.31ರಷ್ಟು ಫಲಿತಾಂಶ ಸಾಧಿಸುವ ಮೂಲಕ ರಾಜ್ಯದಲ್ಲಿ 22ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಭಾರಿ ಕುಸಿತ ಕಂಡಿರುವುದು ಪೋಷಕರಲ್ಲಿ ಸಾಮಾನ್ಯವಾಗಿ ಆತಂಕ ಮೂಡಿಸಿದೆ.

ಅತಿಥಿ ಉಪನ್ಯಾಸಕರದ್ದು ಒಂದರ್ಥದಲ್ಲಿ ಏನನ್ನು ಹೇಳಲಾಗದ ಮತ್ತು ತೋರಲಾಗದ ಮೌನರೋದನ. ಲಕ್ಷ ಸಂಬಳ ಪಡೆಯುವ ಕಾಯಂ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಬದಲು ₹14 ಸಾವಿರ ಸಂಬಳಕ್ಕೆ ಒಬ್ಬರಂತೆ ಉಪನ್ಯಾಸಕರ ನೇಮಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೇ ಈಗ ಪ್ರಧಾನ ಎಂಬಂತಾಗಿದೆ.

ʼಅತಿಥಿʼ ಉಪನ್ಯಾಸಕ ಎನ್ನುವುದು ಅರೆ ಉದ್ಯೋಗದ ಜಲಂತ ನಿದರ್ಶನ. ಬಿಎ, ಬಿಇಡ್‌, ಎಂಎ, ಎಂಎಸ್ಸಿ, ವಿದ್ಯಾರ್ಹತೆ, ನೆಟ್‌, ಕೆ-ಸೆಟ್‌ನಂತಹ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾದರೂ ಜೀವನ ನಿರ್ವಹಣೆಗಾಗಿ ದಿನಗೂಲಿಗಿಂತ ಕಡಿಮೆ ಇರುವ ಸಂಬಳಕ್ಕೆ ಶ್ರಮಿಸುವುದು ಬಹುತೇಕರಿಗೆ ಅನಿವಾರ್ಯವಾಗಿದೆ. ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳಲು ಸರ್ಕಾರ ಕೂಡ ಅತಿಥಿಗಳಿಗೆ ಅಗತ್ಯ ಗೌರವಧನ ಸೇರಿದಂತೆ ಇತರೆ ಸೌಲಭ್ಯ ನೀಡುತ್ತಿಲ್ಲ. ಇದರಿಂದಾಗಿ ಅವರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಹೇಗೆ ಸಾಧ್ಯ ಎಂಬ ವಾದವೂ ಇದೆ.

ನಾಲ್ಕು ಹೊಸ ಪಿಯು ಕಾಲೇಜು :

ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ಆದರ್ಶ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ 4 ಆದರ್ಶ ವಿದ್ಯಾಲಯಗಳಲ್ಲಿ ಪ್ರಸಕ್ತ ವರ್ಷದಿಂದ ಹೊಸದಾಗಿ ಪಿಯುಸಿ ತರಗತಿಗಳನ್ನು ಆರಂಭಿಸಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.

WhatsApp Image 2025 06 09 at 5.24.11 PM 1
ಔರಾದ್‌ ಆದರ್ಶ ವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ಆರಂಭವಾದ ಪಿಯು ಕಾಲೇಜು

ಔರಾದ್ ಪಟ್ಟಣದಲ್ಲಿರುವ ಆದರ್ಶ ವಿದ್ಯಾಲಯ, ಚಿಟಗುಪ್ಪ ತಾಲ್ಲೂಕಿನ ಬೆಮಳಖೇಡ, ಬಸವಕಲ್ಯಾಣ ತಾಲ್ಲೂಕಿನ ರಾಜೋಳ ಹಾಗೂ ಬೀದರ್ ತಾಲ್ಲೂಕಿನ‌ ಜನವಾಡ ಗ್ರಾಮದಲ್ಲಿರುವ ಆದರ್ಶ ಪ್ರೌಢ ಶಾಲೆಗಳಲ್ಲಿ ಪದವಿ ಪೂರ್ವ ಕಾಲೇಜು ಶುರುವಾಗಿದೆ. ಇಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಆರಂಭಿಸಲಾಗಿದೆ. ಈ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಹಿನ್ನೆಲೆ ಸಮೀಪದ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯರಿಗೆ ಪ್ರಭಾರ ಜವಾಬ್ದಾರಿ ನೀಡಲಾಗಿದೆ.

ಕಾಯಂ ಉಪನ್ಯಾಸಕರಿಗೆ ಹೊರೆ :

ʼಔರಾದ್‌ ಆದರ್ಶ ಪಿಯು ಕಾಲೇಜಿಗೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರನ್ನು ನಿಯೋಜಿಸಲಾಗಿದೆ, ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಆದರ್ಶ ಪಿಯು ಕಾಲೇಜಿಗೆ ಮನ್ನಳ್ಳಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರು, ಬಸವಕಲ್ಯಾಣ ತಾಲ್ಲೂಕಿನ ರಾಜೋಳ ಆದರ್ಶ ಪಿಯು ಕಾಲೇಜಿಗೆ ಹುಮನಾಬಾದ್‌ಪಟ್ಟಣದ ಸರ್ಕಾರಿ ಬಾಲಕಿಯರ ಪಿಯುಸಿ ಕಾಲೇಜಿನ ಉಪನ್ಯಾಸಕರು ಹಾಗೂ ಬೀದರ್ ತಾಲ್ಲೂಕಿನ‌ ಜನವಾಡ ಗ್ರಾಮದ ಆದರ್ಶ ಕಾಲೇಜಿಗೆ ಬೀದರ್‌ನ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು, ಇನ್ನೂ ಉಪನ್ಯಾಸಕರ ಕೊರತೆ ಎದುರಾದರೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದುʼ ಎಂದು ತಿಳಿಸಿದ್ದಾರೆ.

ನಾಲ್ಕು ಕಡೆ ಹೊಸ ಕಾಲೇಜು ಆರಂಭ ಹಿನ್ನೆಲೆ ಕಾಯಂ ಉಪನ್ಯಾಸಕರ ಕೆಲಸದ ಮೇಲೆ ಪರಿಣಾಮ ಬೀಳುತ್ತಿವೆ. ಕಾಯಂ ನೌಕರರು ತಮ್ಮ ಕಾಲೇಜಿನ ನಿರ್ವಹಣೆ ಜೊತೆಗೆ ಸಮೀಪದ ಕಾಲೇಜುಗಳಿಗೆ ಹೋಗಿ ಪಾಠ ಮಾಡಬೇಕಾಗಿದೆ, ಜೊತೆಗೆ ಹೆಚ್ಚುವರಿ ಪ್ರಾಚಾರ್ಯ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಹೊಸ ಕಾಲೇಜುಗಳು ಸಹ ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ ಆಗುವುದರಲ್ಲಿ ಸಂದೇಹವಿಲ್ಲ.

ಇದನ್ನೂ ಓದಿ : ಪ್ರೊ. ಬಿ.ಕೃಷ್ಣಪ್ಪನವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಇಂದಿನ ತುರ್ತು

ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಕೊರತೆಯಂತೂ ಇದ್ದೇ ಇದೆ. ಕೆಲವು ಕಾಲೇಜುಗಳಿಗೆ ಅರ್ಧದಷ್ಟು ʼಅತಿಥಿʼ ಉಪನ್ಯಾಸಕರೇ ಆಧಾರವಾಗಿದ್ದಾರೆ. ಇನ್ನು ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಗ್ರಂಥಪಾಲಕರು, ಸಹಾಯಕರು, ದೈಹಿಕ ಶಿಕ್ಷಣ ಉಪನ್ಯಾಸಕರಿಲ್ಲದ ಕಾರಣ ಇರುವ ಉಪನ್ಯಾಸಕರು, ಪ್ರಾಚಾರ್ಯರೇ ಎಲ್ಲ ಕೆಲಸಕ್ಕೂ ʼಸೈʼ ಎನ್ನಬೇಕಾಗಿದೆ. ಕಾಲೇಜಿನ ಸಣ್ಣಪುಟ್ಟ ಕೆಲಸಗಳಿಗೆ ಉಪನ್ಯಾಸಕರು, ಪ್ರಾಚಾರ್ಯರೇ ಬೆಳಿಗ್ಗೆ ಬೇಗ ಕಾಲೇಜಿಗೆ ಹಾಜರಾಗಿ ತರಗತಿ ಕೋಣೆಗಳು ತೆರೆಯಬೇಕಾದ ಪರಿಸ್ಥಿತಿ ಇರುವುದು ಕಣ್ಣೆದುರಿಗೆ ಇರುವ ಉದಾಹರಣೆ.

ಫಲಿತಾಂಶ ಸುಧಾರಣೆಗೆ ಕ್ರಮ :

ʼ2024-25ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಪಿಯುಸಿ ಫಲಿತಾಂಶ ಭಾರಿ ಕುಸಿತ ಕಂಡಿತು. ಇದರಿಂದ ಶಿಕ್ಷಣ ಇಲಾಖೆ ಹಾಗೂ ಪೋಷಕರಿಗೂ ಆತಂಕ ಮೂಡಿಸಿತು. ಹೀಗಾಗಿ ಗುಣಮಟ್ಟ ಶಿಕ್ಷಣ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಈ ಬಾರಿ ಇಲಾಖೆ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಿತಿ ರಚನೆ, ಉಪನ್ಯಾಸಕರಿಗೆ ಜಿಲ್ಲಾ ಮಟ್ಟದ ವಿಶೇಷ ಕಾರ್ಯಗಾರ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಿಗ್ಗೆ, ಸಾಯಂಕಾಲ ವಿಶೇಷ ತರಗತಿ ನಡೆಸಲು ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿ ಶೂನ್ಯ ಫಲಿತಾಂಶ ಸಂಪಾದನೆ ಮಾಡಿದ 13 ಕಾಲೇಜುಗಳಿಗೆ ಶೋಕಾಸ್‌ ನೋಟಿಸ್‌ ನೀಡಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆʼ ಎಂದು ಡಿಡಿಪಿಯು ʼಈದಿನ.ಕಾಮ್‌ʼ ಗೆ ತಿಳಿಸಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

Download Eedina App Android / iOS

X