ಸಾಹಿತ್ಯ ಕೃತಿಗಳ ಅನುಸಂಧಾನ, ಪತ್ರಿಕೆಗಳ ಓದು, ಪತ್ರಿಕೋದ್ಯಮ ಅಧ್ಯಯನದಿಂದ ಪ್ರತಿಯೊಬ್ಬರಲ್ಲಿ ಸಾಮಾಜಿಕ ಹೊಣೆಗಾರಿಕೆ ಬರುತ್ತದೆ. ಹೊಸ ಅರಿವಿಗೆ ಮಾಧ್ಯಮಗಳು ಹಾದಿಯಾಗಿವೆ ಎಂದು ಪತ್ರಕರ್ತ ಬಾಲಾಜಿ ಕುಂಬಾರ ಅಭಿಪ್ರಾಯಪಟ್ಟರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ‘ಮಾಧ್ಯಮಗಳು ಮತ್ತು ಸಮಕಾಲೀನ ಸ್ಪಂದನೆ ‘ ಕುರಿತು ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಸಂವಾದ ಸಮಾರಂಭದಲ್ಲಿ ಅವರು ಮಾತನಾಡಿ, ʼನಮ್ಮ ಸುತ್ತಲಿನ ಆಗು ಹೋಗುಗಳ ಬಗೆಗೆ ಪ್ರಜ್ಞೆ ಮೂಡಿಸುವ ಕೆಲಸ ಮಾಧ್ಯಮಗಳಿಂದ ಸಾಧ್ಯವಾಗುತ್ತದೆʼ ಎಂದರು.
ʼಹಳ್ಳಿ , ನಗರ ಸೇರಿದಂತೆ ಎಲ್ಲಡೆ ಸಮಸ್ಯೆ ಇದ್ದೇ ಇರುತ್ತವೆ. ಆ ಸಮಸ್ಯೆಗಳನ್ನು ಮಾಧ್ಯಮಗಳು ಪ್ರಭುತ್ವಕ್ಕೆ , ಆಳುವವರಿಗೆ, ಅಧಿಕಾರದಲ್ಲಿರುವವರಿಗೆ ತಲುಪಿಸುವ ಕೆಲಸ ಮಾಡುತ್ತವೆ. ಆಡಳಿತಾತ್ಮಕ ಸುಧಾರಣೆಗೆ, ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾಧ್ಯಮಗಳ ಶ್ರಮಿಸುತ್ತವೆ. ಸತ್ಯಾಸತ್ಯತೆ ಕುರಿತು ಹಿಂದೆಂದಿಗಿಂತಲೂ ಇಂದು ಹೆಚ್ಚು ಒರೆಗೆ ಹಚ್ಚಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ ಮಾಹಿತಿಗಳ ನಿಖರತೆ, ಅಧಿಕೃತತೆಯನ್ನು ಸೂಕ್ಮ್ಮವಾಗಿ ಯೋಚಿಸುವ ಅಗತ್ಯವಿದೆʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ʼಮಾಧ್ಯಮಗಳು ತಮ್ಮ ಸಾಂಸ್ಕೃತಿಕ ಹೊಣೆಗಾರಿಕೆಯಿಂದ ಪ್ರಜಾಪ್ರಭುತ್ವ, ಮಾನವೀಯತೆಯ ಜೀವಂತಿಕೆಯನ್ನು ಕಾಪಾಡಿವೆ. ಲೋಕ ಬದಲಾವಣೆ ಮಾಧ್ಯಮಗಳ ದೊಡ್ಡ ಜವಾಬ್ದಾರಿಯಾಗಿದೆʼ ಎಂದರು.
ʼಸಮಕಾಲೀನ ಸ್ಪಂದನೆಯ ಗುಣವಿರುವ ಮಾಧ್ಯಮಗಳು ಎಂದಿಗೂ ಜನರ ಹೃದಯದಲ್ಲಿ ನೆಲೆಸುತ್ತವೆ. ಸಾಮಾಜಿಕ ಸಂಕೀರ್ಣತೆ, ಸಮಸ್ಯೆಗಳು ತೊಡೆದು ಹಾಕುವ ಪ್ರಾಮಾಣಿಕ ಕೆಲಸ ಮಾಧ್ಯಮಗಳು ನಿರಂತರ ಮಾಡುತ್ತಿವೆ. ಮಾಧ್ಯಮಗಳು ಇಲ್ಲದ ಲೋಕ ಊಹಿಸಲು ಸಾಧ್ಯವಿಲ್ಲ. ಪತ್ರಿಕೆಗಳು ಇಲ್ಲದಿದ್ದರೆ ಜಡ ಜಗತ್ತು ರೂಪುಗೊಳ್ಳುವ ಸಾಧ್ಯತೆ ಇತ್ತು. ಪ್ರಭುತ್ವ, ರಾಜಕಾರಣ, ಸಮಾಜ, ಕೃಷಿ, ಪರಿಸರ, ವಿಜ್ಞಾನ, ತಂತ್ರಜ್ಞಾನ ಹೀಗೆ ಅಗಾಧ ಸಂಗತಿಗಳು ಜನರಿಗೆ ತಲುಪಿಸುವ ಮೂಲಕ ಮಾಧ್ಯಮಗಳು ಸಮಾಜವನ್ನು ಬೆಳೆಸುತ್ತಿವೆʼ ಎಂದರು.
ಶ್ರೀ ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಸಂದೀಪ, ಪ್ರಭಾಕರ ನವಗಿರೆ, ಪವನ ಪಾಟೀಲ , ವೀರೇಶ ಸ್ವಾಮಿ, ಶ್ರೀನಿವಾಸ ಉಮಾಪುರೆ, ನಾಗರಾಜ ನಾಸೆ, ಕೃಷ್ಣ ಗೌಳಿ ಸಸ್ತಾಪುರ, ನಾಗವೇಣಿ ವಟಗೆ, ಗುರುದೇವಿ ಕಿಚಡೆ, ಶೃತಿ ಮಠಪತಿ, ಡಾ. ಬಸವರಾಜ ಖಂಡಾಳೆ, ಚೆನ್ನಬಸಪ್ಪ ಗೌರ, ಎಂಡಿ ಜಬಿ , ಸಂಗೀತಾ ಮಹಾಗಾವೆ, ಜಗದೇವಿ ಜವಳಗೆ, ಮೊದಲಾದವರು ಇದ್ದರು.
ಈ ಸುದ್ದಿ ಓದಿದ್ದೀರಾ? ಎಸ್‍ಎಸ್‍ಎಲ್‍ಸಿ ಪತ್ರಿಕೆ ಮರು ಮೌಲ್ಯಮಾಪನ : ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ
ಈ ಸಂದರ್ಭದಲ್ಲಿ ಈ ದಿನ ಡಾಟ್ ಕಾಮ್ ಪ್ರಕಟಿಸಿದ ‘ಅರಿವೆ ಅಂಬೇಡ್ಕರ್ ‘ ಕೃತಿ ಕಾಲೇಜಿಗೆ ಕಾಣಿಕೆ ರೂಪದಲ್ಲಿ ಕೊಡಲಾಯಿತು. ಸಚಿನ ಬಿಡವೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿದರು. ರೋಶನ್ ಬೀ ಯದಲಾಪುರ ವಂದಿಸಿದರು.