ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಶಿವಕುಮಾರ್ (52) ಕೊಲೆಯಾದ ವ್ಯಕ್ತಿ. ರೇವಣಸಿದ್ದ (22) ಕೊಲೆಗೈದ ಮಗ. ಆರೋಪಿ ರೇವಣಸಿದ್ದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಶಿವಕುಮಾರ್ ದಿನಾಲೂ ಮದ್ಯ ಸೇವಿಸಿ ಬಂದು ಮನೆಯಲ್ಲಿ ಕುಟುಂಬಸ್ಥರಿಗೆ ಗಲಾಟೆ ಮಾಡುತ್ತಿದ್ದ. ಭಾನುವಾರ (ಮೇ11) ರಂದು ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಬಂದು ಪುನಃ ಕಿರಿಕಿರಿ ತೆಗೆದಿದ್ದ. ಇದರಿಂದ ಕೋಪಗೊಂಡ ಮಗ ರೇವಣಸಿದ್ದ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಗಂಭೀರ ಗಾಯಗೊಂಡಿದ್ದ ಶಿವಕುಮಾರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹುಮನಾಬಾದ್ ಡಿವೈಎಸ್ಪಿ ಜೆ.ಎಸ್.ನ್ಯಾಮೇಗೌಡ, ಬಸವಕಲ್ಯಾಣ ಸಿಪಿಐ ಅಲಿಸಾಬ್, ಹುಲಸೂರ ಪಿಎಸ್ಐ ಶಿವಪ್ಪ ಮೇಟಿ ಹಾಗೂ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.