ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಕ್ರವಾರ (ಮಾ.21) ಆರಂಭಗೊಂಡಿದ್ದು, ಮೊದಲ ದಿನ ನಡೆದ ಪ್ರಥಮ ಭಾಷೆ ವಿಷಯದ ಪರೀಕ್ಷೆಗೆ 1,039 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಬೀದರ್ ಜಿಲ್ಲೆಯ 91 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1,264 ಕೊಠಡಿಗಳಲ್ಲಿ ಪರೀಕ್ಷೆ ನಡೆಯಿತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ನೇರ ವೀಕ್ಷಣೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಸಹ ಮಾಡಲಾಗಿತ್ತು.
ʼಪರೀಕ್ಷೆಗೆ ಒಟ್ಟು 26,507 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು, ಈ ಪೈಕಿ 25,468 ವಿದ್ಯಾರ್ಥಿಗಳು ಹಾಜರಾಗಿದ್ದರು. 1,039 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆʼ ಎಂದು ಡಿಡಿಪಿಐ ಕಚೇರಿ ಪ್ರಕಟಣೆ ತಿಳಿಸಿದೆ.
ಪರೀಕಾ ಕೇಂದ್ರಗಳಿಗೆ ಡಿಸಿ, ಎಸ್ಪಿ ಭೇಟಿ :
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬೀದರ್ ಓಲ್ಡ್ ಸಿಟಿಯಲ್ಲಿರುವ ಆಲ್ ಅಮೀನ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಬೀದರ್ ನಗರದ ಲಕ್ಷ್ಮೀಬಾಯಿ ಕಮಠಾಣೆ ಶಾಲೆ ಮತ್ತು ಜೀಜಾಮಾತಾ ಶಾಲೆಯ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿರುವ ಬಗ್ಗೆ ವೀಕ್ಷಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಹಾಜರಾತಿ ವಿವರ :
ಔರಾದ್ ತಾಲ್ಲೂಕಿನಲ್ಲಿ ಒಟ್ಟು 3,330 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಈ ಪೈಕಿ 3,222 ವಿದ್ಯಾರ್ಥಿಗಳು ಹಾಜರಾದರೆ, 108 ವಿದ್ಯಾರ್ಥಿಗಳು ಗೈರಾದರು. ಬಸವಕಲ್ಯಾಣದಲ್ಲಿ 5,348 ವಿದ್ಯಾರ್ಥಿಗಳ ಪೈಕಿ 5,153 ವಿದ್ಯಾರ್ಥಿಗಳು ಹಾಜರಾದರೆ, 195 ವಿದ್ಯಾರ್ಥಿಗಳು ಗೈರಾದರು. ಭಾಲ್ಕಿಯಲ್ಲಿ 4,323 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 4,095 ವಿದ್ಯಾರ್ಥಿಗಳ ಹಾಜರಾದರೆ, 228 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಮನೆಯಲ್ಲಿ ತಾಯಿ ನಿಧನ, ಮಡುಗಟ್ಟಿದ ದುಃಖದ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿ
ಬೀದರ್ ತಾಲ್ಲೂಕಿನಲ್ಲಿ 7,594 ವಿದ್ಯಾರ್ಥಿಗಳ ಪೈಕಿ 7,278 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರೆ, 316 ವಿದ್ಯಾರ್ಥಿಗಳು ಗೈರಾದರು. ಹುಮನಾಬಾದ ತಾಲ್ಲೂಕಿನಲ್ಲಿ 5,912 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 5,720 ವಿದ್ಯಾರ್ಥಿಗಳು ಹಾಜರಾದರೆ, 192 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು.